ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ: ಮಹಿಳೆಯೊಬ್ಬರ 1 ಎಕರೆ 80 ಸೆಂಟ್ಸ್ ಜಮೀನನನ್ನು ನಕಲಿ ದಾಖಲೆ, ನಕಲಿ ವ್ಯಕ್ತಿಯ ಆಧಾರದಲ್ಲಿ ಬೇರೊಬ್ಬರಿಗೆ ಪರಾಭಾರೆ ಮಾಡಿದ ಆರೋಪ ಎದುರಿಸುತ್ತಿರುವ ಬಳ್ಳಾರಿಯ ಸಬ್‌ರಿಜಿಸ್ಟ್ರಾರ್ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಗುರುವಾರ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
‘ಸಬ್‌ರಿಜಿಸ್ಟ್ರಾರ್ ನೇರವಾಗಿ ನನ್ನ ನಿಯಂತ್ರಣದಲ್ಲಿರುವುದಿಲ್ಲ. ಹೀಗಾಗಿ, ಪ್ರಕರಣ ಏನು ಎಂಬುದರ ಬಗ್ಗೆ ಮತ್ತು ಎಫ್‌ಐಆರ್ ಆಗಿರುವ ಬಗ್ಗೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ (ಐಜಿಆರ್) ತಿಳಿಸುತ್ತೇನೆ. ನಮ್ಮ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವುದು ಕಂಡು ಬಂದರೆ ಅವರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.
‘ಪ್ರಕರಣ ನನ್ನ ಗಮನಕ್ಕೆ ಬಂದ ಕೂಡಲೇ ಉಪ ವಿಭಾಗಾಧಿಕಾರಿಗೆ ತಿಳಿಸಿ, ಕ್ರಮಕ್ಕೆ ಸೂಚಿಸಿದ್ದೇನೆ. ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೂ ಚರ್ಚೆ ನಡೆಸುತ್ತೇನೆ‘ ಎಂದು ಮಿಶ್ರಾ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಸ್ತಿ ನೋಂದಣಿಗೆ ನೀಡಲಾಗುವ ದಾಖಲೆಗಳನ್ನು ತಿದ್ದಲು ಅವಕಾಶ ಇರುವುದಿಲ್ಲ. ಸರ್ಕಾರದ ಬಳಿ ಅದರ ಸಾಫ್ಟ್‌ಕಾಪಿ ಇದ್ದೇ ಇರುತ್ತದೆ. ಆದ್ದರಿಂದ ದಾಖಲೆಗಳನ್ನು ತಿರುಚುವ ಆತಂಕ ಬೇಡ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.