ಶಾಲೆ
(ಸಾಂಕೇತಿಕ ಚಿತ್ರ)
ಬಳ್ಳಾರಿ: ಸರ್ಕಾರದ ವಸತಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕೆಂಬ ಆಸೆಗೆ ಬಿದ್ದರುವ ಪೋಷಕರು ಅಲ್ಲಿನ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿ, ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುತ್ತಿದ್ದಾರೆ.
ಬಡ ಕುಟುಂಬಗಳೇ ಇಂಥ ಜಾಲಕ್ಕೆ ಸಿಲುಕಿದ್ದು, ಸರ್ಕಾರಿ ಶಾಲೆಯ ಶಿಕ್ಷಕರೂ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕೋಚಿಂಗ್ ಸೆಂಟರ್‌ಗಳಿಗೆ ಸೇರಿರುವ ವಿದ್ಯಾರ್ಥಿಗಳಿಗೆ ವರ್ಷವಿಡೀ ಹಾಜರಾತಿಯನ್ನೂ ನೀಡುತ್ತಿದ್ದಾರೆ.
ವಸತಿ ಶಾಲೆಗಳಿಗೆ ಆರನೇ ತರಗತಿಯಿಂದ ದಾಖಲಾತಿ ಆರಂಭವಾಗುತ್ತದೆ. ಇಲ್ಲಿ ವಸತಿ ಸಹಿತ, ಉಚಿತ ಶಿಕ್ಷಣ ಲಭ್ಯ. ಸೀಟು ಪಡೆಯಬೇಕಿದ್ದರೆ ಪ್ರವೇಶ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಗಳು ವರ್ಷದಿಂದ ವರ್ಷಕ್ಕೆ ಅತ್ಯಂತ ಪೈಪೋಟಿಯಿಂದ ಕೂಡಿದ್ದು, ಸಾಮಾನ್ಯ ಅಧ್ಯಯನಕ್ಕಿಂತಲೂ ಹೆಚ್ಚಿನ ತರಬೇತಿ ಅಗತ್ಯ.
ಹೀಗಾಗಿ ಮಕ್ಕಳನ್ನು ಐದನೇ ತರಗತಿ ವ್ಯಾಸಂಗಕ್ಕೆಂದು ಶಾಲೆಗೆ ಕಳುಹಿಸುವ ಬದಲಿಗೆ, ತರಬೇತಿಗಾಗಿ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುತ್ತಿದ್ದಾರೆ. ಶಾಲೆಗಳ ಶಿಕ್ಷಕರೂ ಕೋಚಿಂಗ್ ಸೆಂಟರ್‌ಗಳೊಂದಿಗೆ ನಂಟು ಹೊಂದಿದ್ದು, ವಿದ್ಯಾರ್ಥಿಗಳನ್ನು ಅಲ್ಲಿಗೆ ಸೇರಿಸಲು ಶಿಕ್ಷಕರೂ ಪ್ರೇರೇಪಿಸುತ್ತಿದ್ದಾರೆ. ಹಾಜರಾತಿ ನೀಡುತ್ತಿದ್ದಾರೆ, ಅಂತಿಮ ಪರೀಕ್ಷೆ ಬರೆಯಲೂ ಅನುಕೂಲ ಮಾಡಿಕೊಡುತ್ತಿದ್ದಾರೆ.
ಅಕ್ರಮ ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆ ಜತೆಗೆ, ವರ್ಷವಿಡೀ ತರಬೇತಿ ನೀಡುತ್ತವೆ. ಕನಿಷ್ಠ ₹60 ಸಾವಿರದಿಂದ ಗರಿಷ್ಠ ₹1 ಲಕ್ಷದವರೆಗೆ ಫೀಸು ವಸೂಲಿ ಮಾಡುತ್ತಿವೆ.
‘ನನ್ನ ಮಗನನ್ನು ನವೋದಯ ವಸತಿ ಶಾಲೆಗೆ ಸೇರಿಸುವ ಬಯಕೆ ಇತ್ತು. ಐದನೇ ತರಗತಿ ಓದುತ್ತಿದ್ದ ಆತನನ್ನು ಕಳೆದ ವರ್ಷ ಕೋಚಿಂಗ್ ಸೆಂಟರ್‌ವೊಂದಕ್ಕೆ ದಾಖಲಿಸಿದ್ದೆ. ಅಲ್ಲಿ ವಸತಿ ವ್ಯವಸ್ಥೆಯನ್ನೂ ಒದಗಿಸಿದ್ದರು. ಇದಕ್ಕಾಗಿ ₹1 ಲಕ್ಷದ ವರೆಗೆ ಹಣ ಪಾವತಿಸಿದ್ದೇನೆ. ಅಲ್ಲಿ ತರಬೇತಿ ಪಡೆದು ನವೋದಯದಲ್ಲಿ ಪರೀಕ್ಷೆ ಬರೆದ ನನ್ನ ಮಗ ಕೆಲವೇ ಅಂಕಗಳಿಂದ ಸೀಟು ವಂಚಿತನಾದ. ಕೋಚಿಂಗ್‌ಗೆಂದು ನಾನು ಖರ್ಚು ಮಾಡಿದ ಹಣವೆಲ್ಲ ವ್ಯರ್ಥವಾಗಿದೆ’ ಎಂದು ಪೋಷಕರೊಬ್ಬರು ನೊಂದು ನುಡಿದಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕೋಚಿಂಗ್ ಸೆಂಟರ್ ದಂಧೆ ನಡೆಯುತ್ತಿದ್ದು, ಕಮಿಷನ್ ಆಸೆಗೆ ಕೆಲ ಶಿಕ್ಷಕರೂ ಅವರೊಂದಿಗೆ ಕೈಜೋಡಿಸಿದ್ದಾರೆ. ವಸತಿ ಶಾಲೆಗಳ ಆಸೆಗೆ ಮರುಳಾಗಿ ಪೋಷಕರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.