ADVERTISEMENT

‘ತೀರ್ಪು ಗೌರವಿಸೋಣ, ಸೌಹಾರ್ದತೆಯಿಂದ ಇರೋಣ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 14:46 IST
Last Updated 9 ನವೆಂಬರ್ 2019, 14:46 IST
ಸಭೆಯಲ್ಲಿ ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸಿಫ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸಿಫ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸೋಣ. ಎಂದಿನಂತೆ ಸೌಹಾರ್ದತೆಯಿಂದ ಇರೋಣ’ ಎಂದು ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸಿಫ್‌ ಹೇಳಿದರು.

ಶನಿವಾರ ನಗರದ ಪಟ್ಟಣ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಜನ ಶಾಂತಿಪ್ರಿಯರು. ಮೊದಲಿನಿಂದಲೂ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ವಾಸ್ತವವಾಗಿ ಶಾಂತಿ ಸಭೆಯ ಅಗತ್ಯವಿರಲಿಲ್ಲ. ಆದರೆ, ಶಿಷ್ಟಾಚಾರಕ್ಕಾಗಿ ನಡೆಸಲಾಗುತ್ತಿದೆ’ ಎಂದರು.

‘ಕೋರ್ಟ್‌ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಯಾರು ಕೂಡ ದುಡುಕಬಾರದು. ಯುವಕರಿಗೆ ಹಿರಿಯರು ಬುದ್ಧಿಮಾತು ಹೇಳಬೇಕು. ಎಲ್ಲರೂ ಸೌಹಾರ್ದತೆಯಿಂದ ಇದ್ದರಷ್ಟೇ ನಾವು ಹಾಗೂ ನಮ್ಮ ಊರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ಲಾವಣ್ಯ ಮಾತನಾಡಿ, ‘ದೇಶದ ಸರ್ವೊಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಎಲ್ಲರೂ ಸ್ವಾಗತಿಸೋಣ. ಎರಡೂ ಕಡೆಯವರಿಗೂ ಸಮಾಧಾನವಾಗುವಂತೆ, ತಕ್ಕಡಿಯಲ್ಲಿ ಸರಿಸಮಾನವಾಗಿ ಅಳೆದು ತೂಗಿ ನ್ಯಾಯ ಕೊಡಲು ಆಗುವುದಿಲ್ಲ. ತೀರ್ಪಿನಿಂದ ಕೆಲವರಿಗೆ ಖುಷಿ, ಕೆಲವರಿಗೆ ದುಃಖ ಆಗಬಹುದು. ಅದನ್ನು ಸಮನಾಗಿ ಸ್ವೀಕರಿಸಬೇಕು’ ಎಂದು ಹೇಳಿದರು.

ಡಿ.ವೈ.ಎಸ್.ಪಿ. ವಿ. ರಘುಕುಮಾರ, ಸಿ.ಪಿ.ಐ.ಗಳಾದ ಸಿದ್ದೇಶ್ವರ, ಪರಸಪ್ಪ ಭಜಂತ್ರಿ, ತಹಶೀಲ್ದಾರ್‌ ಡಿ.ಜಿ. ಹೆಗಡೆ, ಪ್ರಸಾದ್‌ ಗೋಖಲೆ, ಸಂಚಾರ ಇನ್‌ಸ್ಪೆಕ್ಟರ್‌ ಕಾಶಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.