ADVERTISEMENT

ಹೊಸಪೇಟೆ ನಗರಸಭೆ ಚುನಾವಣೆಗೆ ದಾರಿ ಸುಗಮ

ಹೊಸ ವಾರ್ಡ್‌ವಾರು ಮೀಸಲು ನಿಗದಿಪಡಿಸಲು ಮುಂದಾದ ನಗರಾಭಿವೃದ್ಧಿ ಇಲಾಖೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಜೂನ್ 2021, 19:30 IST
Last Updated 26 ಜೂನ್ 2021, 19:30 IST
ಹೊಸಪೇಟೆ ನಗರಸಭೆ ಕಚೇರಿ
ಹೊಸಪೇಟೆ ನಗರಸಭೆ ಕಚೇರಿ   

ಹೊಸಪೇಟೆ: ಹೊಸದಾಗಿ ವಾರ್ಡ್‌ವಾರು ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠಕ್ಕೆ ತಿಳಿಸಿರುವುದರಿಂದ ಹೊಸಪೇಟೆ ನಗರಸಭೆ ಚುನಾವಣೆಗೆ ಬಹುತೇಕ ದಾರಿ ಸುಗಮಗೊಂಡಂತಾಗಿದೆ.

2019ರ ಮಾರ್ಚ್‌ನಲ್ಲಿ ನಗರಸಭೆ ಅವಧಿ ಪೂರ್ಣಗೊಂಡಿತ್ತು. ಬಳಿಕ ನಗರಾಭಿವೃದ್ಧಿ ಇಲಾಖೆಯು ವಾರ್ಡ್‌ವಾರು ಮೀಸಲು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ನಗರಸಭೆ ಸದಸ್ಯ ವೇಣುಗೋಪಾಲ ಸೇರಿದಂತೆ ಇತರರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ ಕೇಳಿತ್ತು. ಅದಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯಿಸಿ ಜೂ. 24ರಂದು ನ್ಯಾಯಾಲಯದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

‘ಹೊಸ ಅಧಿಸೂಚನೆ ಹೊರಡಿಸಲು ನಗರಾಭಿವೃದ್ಧಿ ಇಲಾಖೆಯು ಕ್ರಮ ಜರುಗಿಸಬಹುದು ಎಂದು ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅದರ ಪ್ರಕಾರವೇ ಈಗ ಹಳೆಯ ಅಧಿಸೂಚನೆ ಹಿಂಪಡೆಯಲಾಗಿದೆ. ಹೊಸದಾಗಿ ವಾರ್ಡ್‌ವಾರು ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ತಿಳಿಸಿದ್ದಾರೆ. ಇಲಾಖೆಯು ನ್ಯಾಯಾಲಯಕ್ಕೆ ಪತ್ರ ಬರೆದಿರುವ ವಿಷಯ ಗೊತ್ತಾಗುತ್ತಿದ್ದಂತೆ ಈ ಕುರಿತು ಹೋರಾಟ ನಡೆಸುತ್ತಿರುವವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಉದ್ದೇಶಪೂರ್ವಕವಾಗಿಯೇ ನಾಲ್ಕೈದು ವಾರ್ಡ್‌ಗಳಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದೆ. ಈಗ ಸರ್ಕಾರವೇ ಹೊಸ ಮೀಸಲಾತಿ ನಿಗದಿಗೊಳಿಸುವುದಾಗಿ ಪತ್ರ ಬರೆದು ತಿಳಿಸಿರುವುದರಿಂದ ಪ್ರಕರಣ ಕೊನೆಗೊಂಡಂತಾಗಿದೆ. ನನ್ನ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ’ ಎಂದು ಕೆ. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಎರಡು ವರ್ಷ ವಿಳಂಬ

ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಈಗಾಗಲೇ ನಗರಸಭೆಗೆ ನಡೆಯಬೇಕಿದ್ದ ಚುನಾವಣೆಗೆ ಎರಡು ವರ್ಷ ವಿಳಂಬವಾಗಿದೆ. ಈಗ ಯಾವುದೇ ಕಾರಣಕ್ಕೂ ತಡ ಮಾಡಬಾರದು ಎನ್ನುವುದು ಮಾಜಿ ಸದಸ್ಯರ ಹಕ್ಕೊತ್ತಾಯವಾಗಿದೆ.

‘ಎರಡು ವರ್ಷಗಳಿಂದ ನಗರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆಯುತ್ತಿದೆ. ವಾರ್ಡ್‌ ಜನರಿಗೆ ಕುಂದುಕೊರತೆ ಹೇಳಿಕೊಳ್ಳಲು ವೇದಿಕೆ ಇಲ್ಲದಂತಾಗಿದೆ. ಬೇಗ ಚುನಾವಣೆ ನಡೆದು ಜನಪ್ರತಿನಿಧಿಗಳು ಆಯ್ಕೆಯಾದರೆ ಸಮಸ್ಯೆ ಬಗೆಹರಿದಂತಾಗುತ್ತದೆ. ಎಲ್ಲ ಕೆಲಸಗಳು ಬೇಗ ಆಗಬಹುದು’ ಎಂದರು.

ಸರ್ವಾಧಿಕಾರಿ ಮನಃಸ್ಥಿತಿಗೆ ಹಿನ್ನಡೆ

‘ತಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು, ಆಗಬೇಕು ಎಂದು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದವರಿಗೆ ಈ ಪ್ರಕರಣದಿಂದ ಸಾಕಷ್ಟು ಹಿನ್ನಡೆಯಾಗಿದೆ. ಸತ್ಯಕ್ಕೆ ಜಯ ಸಂದಿದೆ’ ಎಂದು ಹೆಸರು ಹೇಳಲಿಚ್ಛಿಸದ ನಾಲ್ವರು ಮಾಜಿ ನಗರಸಭೆ ಸದಸ್ಯರು ತಿಳಿಸಿದ್ದಾರೆ.

‘ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಪಡಿಸಿಕೊಂಡು ಅವರ ಮೂಗಿನ ನೇರಕ್ಕೆ ಮೀಸಲು ನಿಗದಿ ಮಾಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನ್ಯಾಯಾಲಯದಲ್ಲಿ ಆದ ಹಿನ್ನಡೆಯಿಂದ ಅವರಿಗೆ ತಪರಾಕಿ ಕೊಟ್ಟಂತಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.