ADVERTISEMENT

‘ರೋಬೋಟಿಕ್‌’ನಲ್ಲಿ ರೋಬೋಟ್‌ ಮಾತು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 13:35 IST
Last Updated 18 ಸೆಪ್ಟೆಂಬರ್ 2018, 13:35 IST
ರೋಬೋಟಿನ ಗುಂಡಿ ಒತ್ತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌
ರೋಬೋಟಿನ ಗುಂಡಿ ಒತ್ತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌   

ಹೊಸಪೇಟೆ: ಎರಡು ದಿನಗಳ ರೋಬೋಟಿಕ್‌ ಕಾರ್ಯಾಗಾರ ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಮಂಗಳವಾರ ಆರಂಭಗೊಂಡಿತು.

ಬೆಂಗಳೂರಿನ ‘ವೋಲ್ಟ್‌ ಸ್ಪೇಸ್‌’ನ ಎಂಜಿನಿಯರ್‌ಗಳಾದ ಲಕ್ಷ್ಮಣ್‌, ಕಿರೀಟ್‌ ಚೌಧರಿ ಹಾಗೂ ಶ್ರೀನಿವಾಸನ್‌ ಅವರು, ‘ಸಾರಿಗೆ ಉದ್ದೇಶಕ್ಕಾಗಿ ಉಪಯೋಗಿಸುವ ‘ಲೈನ್‌ ಫಾಲೋವರ್‌’, ಚಾಲಕ ರಹಿತ ಕಾರಿಗೆ ಬಳಸುವ ‘ವಾಲ್‌ ಫಾಲೋವರ್‌’, ಸ್ವಯಂಚಾಲಿತವಾಗಿ ಚಲಿಸುವ ‘ಅಬಾಸ್ಟ್ರ್ಯಾಕ್ಟಲ್‌ ಡಿಟೆಕ್ಟರ್‌’ ರೋಬೋಟ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು.

‘ಮೂರು ಬಗೆಯ ರೋಬೋಟ್‌ಗಳನ್ನು ₹ 1,500ರಲ್ಲಿ ತಯಾರಿಸಬಹುದು. ಇವುಗಳು ಹೇಗೆ ಕೆಲಸ ನಿರ್ವಹಿಸುತ್ತವೆ. ಯಾವ್ಯಾವ ಸಾಧನಗಳಿಗೆ ಅಳವಡಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿದ್ದೇವೆ’ ಎಂದು ಲಕ್ಷ್ಮಣ ತಿಳಿಸಿದರು.

ADVERTISEMENT

‘ಅತ್ಯಂತ ಸರಳ ರೀತಿಯಲ್ಲಿ ರೋಬೋಟ್‌ಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದು ಪ್ರಾಜೆಕ್ಟ್‌ ತಯಾರಿಸಲು ಬಹಳ ಸಹಕಾರಿಯಾಗಲಿದೆ’ ಎಂದು ಎಲೆಕ್ಟ್ರಿಕಲ್‌ ವಿಭಾಗದ ಏಳನೇ ಸೆಮಿಸ್ಟರ್‌ನ ಅಕ್ಷತಾ, ಭೂತರಾಜ ಹೇಳಿದರು.

ಇದಕ್ಕೂ ಮುನ್ನ ಕಾಲೇಜಿನ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌ ಉದ್ಘಾಟಿಸಿ, ‘ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ರೋಬೋಟ್‌ಗಳ ಬಳಕೆ ಹೆಚ್ಚಾಗಲಿದೆ. ಕೃಷಿ, ಕೈಗಾರಿಕೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲಿವೆ. ವಿವಿಧ ರೀತಿಯ ರೋಬೋಟ್‌ಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಈ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.

ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಪ್ರೊ. ಮಧ್ವರಾಜ್‌, ಕಾರ್ಯಕ್ರಮದ ಸಂಚಾಲಕರಾದ ಫಿರ್ದೋಶ್‌ ಪರ್ವಿನ್‌, ಪ್ರೊ. ಶಾಂತಕುಮಾರ ಇದ್ದರು. 70 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.