ADVERTISEMENT

ವಾಜಪೇಯಿ ಜೈವಿಕ ಉದ್ಯಾನ: ಕೊನೆಗೂ ಬಂತು ಶುಭ ಗಳಿಗೆ

ಎಂಟು ತಿಂಗಳ ವಿಳಂಬದ ನಂತರ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇಂದಿನಿಂದ ಸಫಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿನ ಹುಲಿ ಸಫಾರಿಗೆ ಹೋಗುವ ಪ್ರವೇಶ ದ್ವಾರ
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿನ ಹುಲಿ ಸಫಾರಿಗೆ ಹೋಗುವ ಪ್ರವೇಶ ದ್ವಾರ   

ಹೊಸಪೇಟೆ: ಎಂಟು ತಿಂಗಳ ವಿಳಂಬದ ನಂತರ ತಾಲ್ಲೂಕಿನ ಕಮಲಾಪುರ ಬಳಿಯ ಬಿಳಿಕಲ್‌ ಸಂರಕ್ಷಿತ ಅರಣ್ಯದಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಫಾರಿ ಆರಂಭಕ್ಕೆ ಕಾಲ ಕೂಡಿ ಬಂದಿದೆ.

2018ರ ಆರಂಭದಲ್ಲೇ ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನ ಆರಂಭಿಸಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಹುಲಿ, ಸಿಂಹ ಸಫಾರಿ ಆರಂಭಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ, ಸಫಾರಿ ಆರಂಭಿಸುತ್ತಿರುವುದನ್ನು ಪ್ರಶ್ನಿಸಿ ಪರಿಸರ ಪ್ರೇಮಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಹುಲಿ, ಸಿಂಹಗಳನ್ನು ಇರಿಸುವ ಪ್ರದೇಶದಲ್ಲಿ ಲೋಹದ ಜಾಲರಿ ನಿರ್ಮಿಸುವುದು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸ ತಡವಾಗಿತ್ತು. ಇದರಿಂದಾಗಿ ಸಫಾರಿ ಆರಂಭವಾಗಲು ವಿಳಂಬವಾಯಿತು.

ಈಗ ಎಲ್ಲ ಕೆಲಸ ಪೂರ್ಣಗೊಂಡಿದೆ.ಹುಲಿ ಹಾಗೂ ಸಿಂಹ ಸಫಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶುಕ್ರವಾರ (ಜೂ.21) ಅಧಿಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ADVERTISEMENT

ಉದ್ಯಾನಕ್ಕೆ ನಾಲ್ಕು ಹುಲಿ, ಎರಡು ಸಿಂಹಗಳು ಬಂದು ಎರಡು ತಿಂಗಳಾಗಿವೆ.ಈಗಾಗಲೇ ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಪ್ರಾಯೋಗಿಕವಾಗಿ ಅವುಗಳನ್ನು, ಅವುಗಳಿಗೆ ಇರಿಸಲು ನಿಗದಿಪಡಿಸಿರುವ ಸ್ಥಳದ ಬಯಲು ಪ್ರದೇಶದಲ್ಲಿ ಬಿಡಲಾಗಿದೆ. ಅವುಗಳು ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ಶೀಘ್ರದಲ್ಲಿಯೇ ಇನ್ನೆರಡು ಸಿಂಹ, ಒಂದು ಹುಲಿ ತಂದು ಬಿಡಲು ಯೋಜಿಸಲಾಗಿದೆ.

ಜೈವಿಕ ಉದ್ಯಾನದ ಪರಿಸರದಲ್ಲಿ 80ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ನೆಲೆಸಿವೆ. ಸಫಾರಿ ಮಾಡುವುದರ ಜೊತೆಗೆ ಪಕ್ಷಿ ವೀಕ್ಷಣೆ, ಅವುಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಕುರುಚಲು ಕಾಡು, ಬಂಡೆಗಲ್ಲುಗಳಿಂದ ಕೂಡಿದ ಉದ್ಯಾನಕ್ಕೆ ಸೇರಿದ 149.50 ಹೆಕ್ಟೇರ್‌ ಪ್ರದೇಶ ಈಗ ಹಸಿರಿನಿಂದ ನಳನಳಿಸುತ್ತಿದೆ. ಉದ್ಯಾನದ ಸಿಬ್ಬಂದಿ ಸತತ ಪರಿಶ್ರಮ ವಹಿಸಿ, ಕಡಿಮೆ ನೀರಿನಲ್ಲಿ ಬೆಳೆಯುವ ಸಾವಿರಾರು ಗಿಡಗಳನ್ನು ಬೆಳೆಸಿದ ಪರಿಣಾಮ ಅವುಗಳು ಬೆಳೆದು ದೊಡ್ಡದಾಗಿವೆ.

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಉದ್ಯಾನದಲ್ಲಿಯೇ ನಾಲ್ಕು ಕೆರೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಸಮರ್ಪಕವಾಗಿ ಮಳೆಯಾಗದ ಕಾರಣ ಅವುಗಳು ಬತ್ತಿ ಹೋಗಿವೆ. ಅಲ್ಲಲ್ಲಿ ಕೆಲವು ಕೊಳವೆಬಾವಿಗಳನ್ನು ಕೊರೈಸಿ ನೀರಿನ ಅಭಾವ ನೀಗಿಸಲಾಗುತ್ತಿದೆ. ಇತ್ತೀಚೆಗೆ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯಿಂದ (ಎಚ್‌.ಎಲ್‌.ಸಿ.) ನೀರು ಪಡೆಯಲು ಅನುಮತಿ ಸಿಕ್ಕಿದ್ದು, ಪೈಪ್‌ಲೈನ್‌ ಮೂಲಕ ನೀರು ಹರಿಸಿಕೊಳ್ಳಲು ಯೋಜನೆ ರೂಪಿಸಿದೆ. ಈ ಯೋಜನೆ ಸಾಕಾರಗೊಂಡರೆ ಉದ್ಯಾನದಲ್ಲಿನ ಪ್ರಾಣಿ–ಪಕ್ಷಿಗಳ ನೀರಿನ ದಾಹ ತಣಿಸಬಹುದು. ಜತೆಗೆ ಇನ್ನಷ್ಟು ಹಸಿರು ಬೆಳೆಸಲು ಅನುಕೂಲವಾಗುತ್ತದೆ.

ಹಂತ ಹಂತವಾಗಿ ಬಳ್ಳಾರಿ ಮೃಗಾಲಯದಿಂದ ಚಿರತೆ, ಕತ್ತೆಕಿರುಬ, ಮೊಸಳೆ, ಕರಡಿಗಳನ್ನು ಸ್ಥಳಾಂತರಿಸಲಾಗುತ್ತದೆ. ಆ ಎಲ್ಲ ಪ್ರಕ್ರಿಯೆ ಮುಗಿಯಲು ಇನ್ನೂ ವರ್ಷ ವರ್ಷವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.