ADVERTISEMENT

ಮರಳು ಗಣಿಗಾರಿಕೆ: ಬಳ್ಳಾರಿ ಜಿಲ್ಲೆಯಲ್ಲಿ 13 ಬ್ಲಾಕ್‌ ಗುರುತು

ಆರ್. ಹರಿಶಂಕರ್
Published 1 ಮೇ 2025, 5:48 IST
Last Updated 1 ಮೇ 2025, 5:48 IST
ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದ ಹಗರಿ ವೇದಾವತಿ ನದಿ ಪಾತ್ರದ ಮರಳು ಬ್ಲಾಕ್‌ 
ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದ ಹಗರಿ ವೇದಾವತಿ ನದಿ ಪಾತ್ರದ ಮರಳು ಬ್ಲಾಕ್‌    

ಬಳ್ಳಾರಿ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಟ್ಟು 13 ಮರಳು ಬ್ಲಾಕ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದೆ. ಈ ಎಲ್ಲ ಬ್ಲಾಕ್‌ಗಳಲ್ಲಿ ಒಟ್ಟಾರೆ 24,11,002 ಮೆಟ್ರಿಕ್‌ ಟನ್‌ ಮರಳು ದಾಸ್ತಾನು ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 

ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2023ರ ನಿಯಮ 31-ಯು ರಂತೆ IV, V ಮತ್ತು ಉನ್ನತ ಶ್ರೇಣಿಯ ಹಳ್ಳ , ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಈ ಮರಳು ಬ್ಲಾಕ್‌ಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ.

ಅದರಂತೆ 2024ರ ಡಿ.3ರಂದು ಮಾರ್ಗಸೂಚಿ ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 260 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಬಳ್ಳಾರಿಯ 13 ಬ್ಲಾಕ್‌ಗಳಿವೆ. ವಿಜಯನಗರ ಜಿಲ್ಲೆಯ 16 ಬ್ಲಾಕ್‌ಗಳಿವೆ.  

ADVERTISEMENT

ಜಿಲ್ಲಾ ಮರಳು ಸಮಿತಿಯ ಸಭೆಯಲ್ಲಿ ಬ್ಲಾಕ್‌ಗಳ ಕುರಿತು ಚರ್ಚಿಸಿ ನಿರ್ಣಯಿಸಲಾಗಿದೆ. ಬ್ಲಾಕ್‌ಗಳನ್ನು ಗುರುತು ಮಾಡಿರುವ ಬಗ್ಗೆ ಕಳೆದ ಜನವರಿಯಲ್ಲಿ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ.

ಜಿಲ್ಲೆಯಲ್ಲಿ ತುಂಗಭದ್ರಾ ನದಿ ಮತ್ತು ವೇದಾವತಿ/ ಹಗರಿ ನದಿಗಳು ಹರಿಯುತ್ತಿವೆ. ಈ ನದಿಗಳ ಪಾತ್ರದಲ್ಲಿ, ಸಂಬಂಧಿತ ತಾಲ್ಲೂಕು ಮರಳು ಸಮಿತಿಯ ಸದಸ್ಯರನ್ನು ಒಳಗೊಂಡ ತಂಡವು ಜಂಟಿಯಾಗಿ ಸಮೀಕ್ಷೆ ನಡೆಸಿ 13 ಮರಳು ಬ್ಲಾಕ್‌ಗಳನ್ನು ಗುರುತು ಮಾಡಿವೆ. 

ಬಳ್ಳಾರಿ ತಾಲೂಕಿನಲ್ಲಿ-3, ಸಿರುಗುಪ್ಪ – 9, ಕಂಪ್ಲಿಯಲ್ಲಿ–1 ಬ್ಲಾಕ್‌ ಅನ್ನು ನಿಗದಿ ಮಾಡಲಾಗಿದೆ. 

ಬಳ್ಳಾರಿ ತಾಲ್ಲೂಕು: ಬೈಲಚಿಂತೆಯ ಹಗರಿ ನದಿ ಪಾತ್ರದ 18 ಎಕರೆ (1,09,847 ಮೆ.ಟನ್‌), ಬೈಲಚಿಂತೆಯ ಜಿ.ನಾಗೇನಹಳ್ಳಿ ಸಮೀಪ ಹಗರಿ ನದಿ ಪಾತ್ರದ 24 ಎಕರೆ (1,45,280), ಯಾಳ್ಪಿ ಗ್ರಾಮದ ಹಗರಿ ನದಿ ಪಾತ್ರದ 18 ಎಕರೆ (1,05,618). 

ಸಿರುಗುಪ್ಪ ತಾಲ್ಲೂಕು: ತುಂಗುಭದ್ರಾ ನದಿ ಪಾತ್ರದಲ್ಲಿ ಬರುವ ನಿಟ್ಟೂರು ಗ್ರಾಮದ 39.20 ಎಕರೆ (2,44,190), ಎಂ. ಸೂಗೂರಿನಲ್ಲಿ 33 ಎಕರೆ (2,08,610), ಎಂ. ಸೂಗೂರಿನ 34 ಎಕರೆ (2,17,620), ಎಂ.ಸೂಗೂರು 36 ಎಕರೆ (2,29,142), ಮಣ್ಣೂರು 32 ಎಕರೆ (2,01,883), ಮಣ್ಣೂರು 31 ಎಕರೆ (1,97,238), ಮಣ್ಣೂರು 29 ಎಕರೆ (1,83,281), ಹಚ್ಚೋಳ್ಳಿಯ 34.80 ಎಕರೆ (2,09,448), ಹಗರಿ ನದಿ ಪಾತ್ರದ ಕೆ. ಬೆಳಗಲ್‌ನ 35 ಎಕರೆ (2,18,335). 

ಕಂಪ್ಲಿ ತಾಲ್ಲೂಕು: ತುಂಗಭದ್ರಾ ನದಿ ಪಾತ್ರದ ಅರೆಹಳ್ಳಿ, ಸಾಣಾಪುರ 24 ಎಕರೆ (1,40,510) ಗುರುತಿಸಲಾಗಿದೆ. 

ಎಲ್ಲ ಬ್ಲಾಕ್‌ಗಳಲ್ಲಿ ಒಟ್ಟಾರೆ  24,11,002 ಮೆಟ್ರಿಕ್‌ ಟನ್‌ ಮರಳು ನಿಕ್ಷೇಪಗೊಂಡಿರುವುದಾಗಿ ಇಲಾಖೆ ಅಂದಾಜು ಮಾಡಿದೆ. 

13 ಬ್ಲಾಕ್‌ಗಳ ಪೈಕಿ ಪ್ರತಿ ತಾಲ್ಲೂಕಿನಲ್ಲೂ ಒಂದೊಂದರಂತೆ ಒಟ್ಟು ಮೂರು ಬ್ಲಾಕ್‌ಗಳನ್ನು ಸರ್ಕಾರದ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದೆ. ಈ ಮೂರು ಬ್ಲಾಕ್‌ಗಳಲ್ಲಿ ಒಟ್ಟು 3,84,700 ಮೆಟ್ರಿಕ್‌ ಟನ್‌ ಮರಳು ನಿಕ್ಷೇಪಗೊಂಡಿರುವುದಾಗಿ ಗೆಜೆಟ್‌ ಅಧಿಸೂಚನೆಯಲ್ಲಿದೆ. 

ಟೆಂಡರ್‌ ಮತ್ತು ಹರಾಜಿಗೆ ಒಟ್ಟು 10 ಬ್ಲಾಕ್‌ಗಳನ್ನು ಹರಾಜಿಗೆ ಇಡಲಾಗಿದ್ದು, ಬಳ್ಳಾರಿ ತಾಲೂಕು ಮತ್ತು ಸಿರುಗುಪ್ಪದಲ್ಲಿ ಒಟ್ಟು ಮೂರು ಬ್ಲಾಕ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಲಾಗಿದೆ.

ಮರಳಿನ ಸರ್ಕಾರಿ ಬೆಲೆ ಏನು? 
IV V ಮತ್ತು ಉನ್ನತ ಶ್ರೇಣಿಗಳ ಹೊಳೆ ನದಿ ಅಣೆಕಟ್ಟು ಜಲಾಶಯ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಿ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಪೂರೈಸುವ ಮರಳಿಗೆ ಟೆಂಡ‌ರ್ ಮೂಲಕ ಗುತ್ತಿಗೆ ಪಡೆದ ಬ್ಲಾಕ್‌ಗಳಿಂದ ಪೂರೈಸಲಾಗುವ ಪ್ರತಿ ಮೆಟ್ರಿಕ್‌ ಟನ್‌ ಮರಳಿಗೆ ₹850 ನಿಗದಿಪಡಿಸಲಾಗಿದೆ ಎಂದು ಸರ್ಕಾರ ಈಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸದಸ್ಯರೊಬ್ಬರಿಗೆ ನೀಡಿದ್ದ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.  ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯಲು ಬ್ಲಾಕ್‌ ಹರಾಜು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.  ಮರಳು ಬ್ಲಾಕ್‌ಗಳನ್ನು ಸರ್ಕಾರ ಹರಾಜಿಗಿಟ್ಟಿದೆಯಾದರೂ ಪರಿಸರ ಅನುಮೋದನೆ ದೊರೆಯುವುದು ವಿಳಂಬವಾಗಬಹುದು ಎಂದು ಎಂದು ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಹರಾಜು ಪ್ರಕ್ರಿಯೆಯ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.