ADVERTISEMENT

ಮಕ್ಕಳಿಗೆ ಹಣ ಉಳಿತಾಯದ ಪಾಠ!

ಕೊಂಬಳಿ ನವನಗರ ಶಾಲೆಯಲ್ಲಿ ‘ಚಿಣ್ಣರ ಬ್ಯಾಂಕ್’ ಆರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 12:32 IST
Last Updated 1 ಫೆಬ್ರುವರಿ 2019, 12:32 IST
ಕೊಂಬಳಿ ನವನಗರ ಶಾಲೆಯಲ್ಲಿ ಉಳಿತಾಯದ ಹಣ ಪಾವತಿಸುತ್ತಿರುವ ವಿದ್ಯಾರ್ಥಿಗಳು
ಕೊಂಬಳಿ ನವನಗರ ಶಾಲೆಯಲ್ಲಿ ಉಳಿತಾಯದ ಹಣ ಪಾವತಿಸುತ್ತಿರುವ ವಿದ್ಯಾರ್ಥಿಗಳು   

ಹೂವಿನಹಡಗಲಿ: ಪೋಷಕರು, ಬಂಧುಗಳು ಪ್ರೀತಿಯಿಂದ ಕಾಸು ಕೈಗಿಟ್ಟಾಗ ಮಕ್ಕಳು ತಿನಿಸಿಗಾಗಿ ಅಂಗಡಿಗೆ ಓಡುವುದು ಸಾಮಾನ್ಯ. ಆದರೆ, ಈ ಹಳ್ಳಿಯ ವಿದ್ಯಾರ್ಥಿಗಳು ಬಾಯಿ ಚಪಲಕ್ಕೆ ಸ್ವಯಂ ಕಡಿವಾಣ ಹಾಕಿಕೊಂಡು ಶಾಲೆಯ ಉಳಿತಾಯ ನಿಧಿಗೆ ಹಣ ಜಮೆ ಮಾಡುತ್ತಾರೆ. ಕೂಡಿಟ್ಟ ಹಣದಲ್ಲೇ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವ ಜತೆಗೆ ಮನೆಯ ಸಣ್ಣಪುಟ್ಟ ಹಣದ ಅಡಚಣೆಗಳಿಗೆ ನೆರವಾಗುತ್ತಾರೆ. ಇದಕ್ಕೆಲ್ಲಾ ಈ ಶಾಲೆಯ ಶಿಕ್ಷಕರೇ ಪ್ರೇರಣೆ.

ತಾಲ್ಲೂಕಿನ ಕೊಂಬಳಿ ನವನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಲವು ವೈಶಿಷ್ಟ್ಯಗಳೊಂದಿಗೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.

ಹಿಂದೆ ತಿಪ್ಪೆ ಗುಂಡಿಗಳಿದ್ದ ಶಾಲೆಯ ಆವರಣ ಇಂದು ಹಸಿರು ಹೊದ್ದು ನಿಂತಿದೆ. ಅಲಂಕಾರಿಕ ಹೂ ಗಿಡಗಳು, ಹಣ್ಣಿನ ಮರಗಳು ನಳನಳಿಸುತ್ತಿವೆ. ‘ಚಿಣ್ಣರ ಬ್ಯಾಂಕ್‌’ ಮೂಲಕ ಮಕ್ಕಳಿಗೆ ಉಳಿತಾಯದ ಮಹತ್ವ ಕಲಿಸಲಾಗುತ್ತಿದೆ. ಮುಖ್ಯಶಿಕ್ಷಕ ಕೆ.ಎ.ಕೆ. ಜಿಲಾನ್, ಸಹಶಿಕ್ಷಕ ಮಾಗಳದ ವೀರೇಶ್ ಅವರ ಕಾಳಜಿಯಿಂದ ಈ ಶಾಲೆ ಗುಣಾತ್ಮಕ ಬದಲಾವಣೆ ಕಂಡಿದೆ.

ADVERTISEMENT

ಈ ಹಿಂದೆ ಕೊಂಬಳಿ, ಹೊನ್ನಾಯಕನಹಳ್ಳಿಯಲ್ಲಿದ್ದ ನಿರಾಶ್ರಿತ ಕೂಲಿ ಕಾರ್ಮಿಕರು ಸರ್ಕಾರಿ ವಸತಿ ಯೋಜನೆ ಫಲಾನುಭವಿಗಳಾಗಿ ನವನಗರದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಿತ್ಯ ಹೊಲ ಗದ್ದೆಗಳ ಕೆಲಸಕ್ಕೆ ಹೋಗುವವರ ಜತೆ ತಾವೂ ಬರುವುದಾಗಿ ಹಠ ಹಿಡಿಯುತ್ತಿದ್ದ ಮಕ್ಕಳಿಗೆ ಪೋಷಕರು ಕಾಸು ಕೊಟ್ಟು ಸುಮ್ಮನಿರಿಸುತ್ತಿದ್ದರು. ಬಳಿಕ ಮಕ್ಕಳು ನೇರವಾಗಿ ಅಂಗಡಿಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಕರು ‘ಅಂಗಡಿಯ ತಿನಿಸು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದರ ಬದಲಾಗಿ ಹಣ ಉಳಿತಾಯ ಮಾಡಿ’ ಎಂಬ ಬುದ್ದಿವಾದಕ್ಕೆ ಮಕ್ಕಳು ಓಗೊಟ್ಟಿದ್ದಾರೆ.

ನಾಲ್ಕು ವರ್ಷದ ಹಿಂದೆ ಈ ಶಾಲೆಯಲ್ಲಿ ‘ಚಿಣ್ಣರ ಬ್ಯಾಂಕ್‌’ ಅಸ್ತಿತ್ವಕ್ಕೆ ಬಂದಿದೆ. ಬೆಳಗ್ಗೆ ಪ್ರಾರ್ಥನೆಯ ಬಳಿಕ ಶಾಲೆಯ ಲೀಡರ್‌ ಎಂ. ರಾಧಿಕಾ ಖಾತೆದಾರರ ಪುಸ್ತಕದೊಂದಿಗೆ ಎಲ್ಲ ತರಗತಿಗಳಿಗೆ ಹೋಗಿ ಹಣ ಕಟ್ಟಿಸಿಕೊಳ್ಳುತ್ತಾರೆ. ಮಕ್ಕಳು ದಿನಾ ₨1ರಿಂದ ₨20 ವರೆಗೆ ಖಾತೆಗೆ ಹಣ ಜಮೆ ಮಾಡುತ್ತಾರೆ. ಸಂಗ್ರಹವಾದ ಮೊತ್ತವನ್ನು ಲೆಕ್ಕ ಸಮೇತ ಶಿಕ್ಷಕರಿಗೆ ಒಪ್ಪಿಸುತ್ತಾರೆ.

ಪ್ರಸ್ತುತ ಒಂದರಿಂದಐದನೇ ತರಗತಿ ಓದುವ 59 ವಿದ್ಯಾರ್ಥಿಗಳು ಖಾತೆದಾರರಾಗಿದ್ದಾರೆ. ಮಕ್ಕಳು ವರ್ಷಕ್ಕೆ ಕನಿಷ್ಠ ಒಂದು ಸಾವಿರದ ವರೆಗೆ ಹಣ ಉಳಿಸುತ್ತಾರೆ. ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ನೋಟ್‌ ಪುಸ್ತಕ, ಪೆನ್‌, ಪೆನ್ಸಿಲ್‌, ರಬ್ಬರ್ ಶಾಲೆಯಲ್ಲಿ ದೊರೆಯುತ್ತವೆ. ಶಿಕ್ಷಕರು ಇದಕ್ಕೆ ‘ಪ್ರಾಮಾಣಿಕ ಅಂಗಡಿ’ ಎಂದು ಹೆಸರಿಟ್ಟು ಹೋಲ್‌ಸೆಲ್‌ ದರದಲ್ಲೇ ನೀಡುತ್ತಾರೆ. ಮಕ್ಕಳು ತಮ್ಮ ಉಳಿತಾಯದ ಹಣದಲ್ಲೇ ಬೇಕಾದ ವಸ್ತು ಖರೀದಿಸುತ್ತಾರೆ.

‘ಶಾಲೆಯಲ್ಲಿ ಹಣ ಉಳಿತಾಯ ವ್ಯವಸ್ಥೆ ಬಂದಾಗಿನಿಂದ ಮಕ್ಕಳಲ್ಲಿ ಪೈಪೋಟಿ ಏರ್ಪಟ್ಟಿದೆ. ಉಳಿತಾಯ ಹಣದಿಂದಲೇ ಕೂಡುವ, ಕಳೆಯುವ ಲೆಕ್ಕಗಳನ್ನು ಕಲಿತಿರುವ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆಯೇ ಬ್ಯಾಂಕಿಂಗ್ ವ್ಯವಹಾರ ನಿವರ್ಹಿಸುತ್ತಿದ್ದಾರೆ. ಮನೆಯಲ್ಲಿ ದಿಢೀರ್ ಹಣದ ಅವಶ್ಯಕತೆ ಎದುರಾದಾಗ ಮಕ್ಕಳು ತಮ್ಮ ಖಾತೆಯಿಂದಲೇ ಹಣ ಬಿಡಿಸಿಕೊಂಡು ತಂದೆ–ತಾಯಿಗಳಿಗೆ ನೆರವಾಗುತ್ತಾರೆ’ ಎಂದು ಮುಖ್ಯಶಿಕ್ಷಕ ಜಿಲಾನ್‌ ತಿಳಿಸಿದರು.

‘ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು, ಉಪಾಹಾರದ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಾರೆ. ಶಾಲೆಗೆ ಮೈಕ್‌ ಸೆಟ್‌, ಬ್ಯಾಂಡ್‌, ಮಕ್ಕಳ ಬಿಸಿಯೂಟಕ್ಕಾಗಿ ತಟ್ಟೆ, ಲೋಟ, ಪೀಠೋಪಕರಣಗಳನ್ನು ದಾನಿಗಳಿಂದಲೇ ಪಡೆದಿದ್ದೇವೆ. ಗ್ರಾಮಸ್ಥರ ಸ್ಪಂದನೆಯಿಂದ ಶಾಲಾ ವಾತಾವರಣ ಅಚ್ಚುಕಟ್ಟಾಗಿದೆ’ ಎನ್ನುತ್ತಾರೆ ಶಿಕ್ಷಕ ಎಂ. ವೀರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.