ಕೊಟ್ಟೂರು: ‘ಕುರಿಗಳು ಕಾಯಿಲೆಗೆ ತುತ್ತಾದಾಗ ಸಕಾಲಕ್ಕೆ ಔಷದೋಪಚಾರ ದೊರೆಯದೆ ಅಸು ನೀಗುತ್ತಿರುವುದರಿಂದ ಕುರಿಗಾಹಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುಡಿಯಾರ್ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ರೈತ ಸಂಘದ ವತಿಯಿಂದ ಸೋಮವಾರ ಮುಖ್ಯ ರಸ್ತೆ ಮೂಲಕ ಪ್ರತಿಭಟನೆ ನಡೆಸಿ ನಂತರ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಳೆದ ವರ್ಷ ರೋಗಕ್ಕೆ ತುತ್ತಾಗಿ ಸತ್ತ ಕುರಿಗಳ ಪರಿಹಾರ ಹಣ ಇದುವರೆಗೂ ನೀಡಿಲ್ಲ ಹಾಗೂ ಜಂತು ನಾಶಕ ಔಷಧಿಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು ಮತ್ತು ಅರಣ್ಯದಲ್ಲಿ ಮೇಯಲು ಅವಕಾಶ ನೀಡಬೇಕು ಹಾಗೂ ಅರಣ್ಯ ಸಿಬ್ಬಂದಿ ಕುರಿಗಾಹಿಗಳಿಗೆ ಮಾನಸಿಕ ಕಿರುಕುಳ ನೀಡುವುದನ್ನು ತಡೆಯಬೇಕು ಎಂದ ಅವರು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸುವುದಾಗಿ ಎಚ್ಚರಿಸಿದರು.
ರೈತ ಮುಖಂಡರಾದ ಎಸ್.ಕೊಟ್ರೇಶ್, ಅಲಬೂರು ಮಂಜುನಾಥ್, ಅಜ್ಜಯ್ಯ, ಹೊಸಕೋಡಿಹಳ್ಳಿ ಮೂಗಪ್ಪ, ಡಿ.ಕೊಟ್ರೇಶ್, ಬಾಲ ಗಂಗಾಧರ್, ಪರಸಪ್ಪ, ರೇವಪ್ಪ, ಬಸಪ್ಪ, ಅಜ್ಜಯ್ಯ, ಎಸ್.ಹನುಮಂತಪ್ಪ, ಕೆ.ಎಚ್.ವೀರಭದ್ರಪ್ಪ, ಹರಾಳು ಗಣೇಶ, ತಿಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.