
ಸಿರುಗುಪ್ಪ: ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಧೂಳಿಗೆ ಸಾರ್ವಜನಿಕರು ನಿತ್ಯವೂ ಸ್ಥಳೀಯ ಆಡಳಿತವನ್ನು ಶಪಿಸುವಂತಾಗಿದೆ. ನಗರದ ಎಲ್ಲಾ ರಸ್ತೆಗಳು ಧೂಳುಮಯವಾಗಿದ್ದು, ಸಿರುಗುಪ್ಪ ಧೂಳುಗುಪ್ಪವಾಗಿ ಮಾರ್ಪಟ್ಟಿದೆ ಎಂಬ ಮಾತು ಜನರಿಂದ ಕೇಳಿಬಂದಿದೆ.
ನಗರದ ಪ್ರತಿ ಮನೆ, ಅಂಗಡಿಗಳಲ್ಲಿ ಸ್ವಚ್ಛ ಮಾಡಿದ ಕ್ಷಣದಲ್ಲಿಯೇ ಧೂಳು ಆವರಿಸಿಕೊಂಡು ಬಿಡುತ್ತದೆ. ವಾಹನ ಸವಾರರ ಫಜೀತಿ ಹೇಳತೀರದು. ಬೈಕ್ ಸವಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಧೂಳಿನಲ್ಲೇ ಮುಳುಗುವಂತಾಗಿದೆ.
ಧೂಳಿನ ಸಮಸ್ಯೆಗೆ ಕಾರಣ: ನಗರ ಸಾಕಷ್ಟು ಬೆಳೆದಿದ್ದರೂ ಮೂಲ ಸೌಕರ್ಯಗಳಿಲ್ಲ. ನಗರದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿಯನ್ನು ಶ್ರೀರಂಗಪಟ್ಟಣದಿಂದ ಜೇವರ್ಗಿವರೆಗಿನ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿ 150ಎ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಲಾಯಿತು. ಆದರೆ ರಸ್ತೆ ಮಾತ್ರ ಕಿರಿದಾಗಿದೆ. ಸಣ್ಣ ಪುಟ್ಟ ಕಾರುಗಳು ಹೋದರೂ ಮಣ್ಣು ಮೇಲೇಳುತ್ತದೆ. ಅತಿಯಾದ ವಾಹನ ಸಂಚಾರ, ಸಂಚಾರ ದಟ್ಟಣೆ, ಬಾರಿ ವಾಹನಗಳ ಹೊಗೆಯ ಕಣಗಳು ಚದುರಿ ಎಲ್ಲಾ ಪ್ರದೇಶಗಳಲ್ಲೂ ಶೇಖರಣೆಯಾಗುತ್ತಿದೆ.
2023ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಯಿತು. ಇಲ್ಲಿಯವರೆಗೆ ಮುಗಿಯದೆ ಸಿರುಗುಪ್ಪ ನಗರದ ಜನರಿಗೆ ಧೂಳಿನಿಂದ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ನಿರ್ವಹಣೆಗೆ ಇಲ್ಲ ಕಾಳಜಿ: ನಗರದಲ್ಲಿ ನಿತ್ಯವೂ ಧೂಳು ಹೆಚ್ಚುತ್ತಿದ್ದಾಗ್ಯೂ ನಗರಸಭೆ ಹಾಗೂ ಇತರೆ ಯಾವುದೇ ಇಲಾಖೆಗಳು ಹಾಗೂ ಗುತ್ತಿಗೆದಾರರು ಧೂಳು ನಿರ್ವಹಣೆ ಬಗ್ಗೆ ಗಮನ ಹರಿಸಿಲ್ಲ. ಪೌರ ಕಾರ್ಮಿಕರು ನಿತ್ಯ ಬೆಳಗಿನ ಜಾವ ರಸ್ತೆ ಬದಿಯಲ್ಲಿನ ಕಸ ಹಾಗೂ ರಸ್ತೆ ಮಧ್ಯದಲ್ಲಿರುವ ಮಣ್ಣು ತೆಗೆಯುತ್ತಿದ್ದಾರೆ. ಆದಾಗ್ಯೂ ಧೂಳು ಮುಕ್ತ ವಾತಾವರಣ ಕಾಣಸಿಗುತ್ತಿಲ್ಲ.
ಉಸಿರಾಟದ ಸಮಸ್ಯೆ, ಅಸ್ತಮಾ, ನ್ಯುಮೋನಿಯಾ ದಂತಹ ಕಾಯಿಲೆಗಳಿಗೆ ಧೂಳು ಮುನ್ನುಡಿ ಬರೆಯುತ್ತಿದೆ. ಗಂಟಲ ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ.
ನಗರದಲ್ಲಿ ದಿನೇ ದಿನೇ ಧೂಳು ಹೆಚ್ಚುತ್ತಿದೆ. ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಧೂಳು ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
-ಎನ್.ನಿಜಾಮ ವುದ್ದಿನ್ ಸ್ಥಳೀಯ ನಿವಾಸಿ ಸಿರುಗುಪ್ಪ
ಧೂಳು ನಿರ್ವಹಣೆಗೆ ಟ್ಯಾಂಕರ್ ಮೂಲಕ ನೀರು ಸಿಂಪರಣೆ ಮಾಡಲಾಗುತಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡರೆ ಧೂಳಿನ ಸಮಸ್ಯೆ ಬಗೆಹರಿಯಲಿದೆ
-ಗಂಗಾಧರ ಪೌರಾಯುಕ್ತರು ನಗರಸಭೆ ಸಿರುಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.