ADVERTISEMENT

ಬಳ್ಳಾರಿ: ನಗರಕ್ಕೆ ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಘಟಕ

ವೇಣಿವೀರಾಪುರ ಬಳಿ ಶಂಕುಸ್ಥಾಪನೆ ಮಾಡಿದ ಶಾಸಕ ಸೋಮಶೇಖರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 9:31 IST
Last Updated 25 ಜನವರಿ 2021, 9:31 IST
ಬಳ್ಳಾರಿ ತಾಲ್ಲೂಕಿನ ವೇಣಿವೀರಾಪುರ ಬಳಿ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಸೋಮವಾರ ಚಾಲನೆ ನೀಡಿದರು.
ಬಳ್ಳಾರಿ ತಾಲ್ಲೂಕಿನ ವೇಣಿವೀರಾಪುರ ಬಳಿ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಸೋಮವಾರ ಚಾಲನೆ ನೀಡಿದರು.   

ಬಳ್ಳಾರಿ: ಮಹಾನಗರ ಪಾಲಿಕೆಯು ಇದೇ ಮೊದಲಬಾರಿಗೆ ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿಯ ತೀರ್ಮಾನ ಕೈಗೊಂಡಿದ್ದು, ವೇಣಿವೀರಾಪುಟದ ಬಳಿಕ ಘಟಕವನ್ನು ಸ್ಥಾಪಿಸಲಿದೆ. ಸ್ವಚ್ಛ ಭಾರತ ಮಿಶನ್ ಅಡಿ ಘಟಕದ ನಿರ್ಮಾಣಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಸೋಮವಾರ ಭೂಮಿಪೂಜೆ ಮಾಡಿದರು.

ನಂತರ ಮಾತನಾಡಿದ ಅವರು, ‘ನಗರದಲ್ಲಿ ಪಾಲಿಕೆ ವಾಹನಗಳ ಮೂಲಕ ಸಂಗ್ರಹಿಸಲಾಗುವ ಘನತ್ಯಾಜ್ಯವನ್ನು ಘಟಕಕ್ಕೆ ತಂದು ಹಸಿಕಸ ಮತ್ತು ಒಣಕಸವನ್ನಾಗಿ ವಿಂಗಡಿಸಿ ವೈಜ್ಞಾನಿಕವಾಗಿ ಗೊಬ್ಬರವನ್ನು ತಯಾರಿಸಲಾಗುವುದು. ನಂತರ ಅದನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟಮಾಡಲಾಗುವುದು’ ಎಂದು ತಿಳಿಸಿದರು.

ಕುಡಿಯುವ ನೀರು: ‘ನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಇರುವ 24*7 ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿ ಬಳಸಿಕೊಂಡು ₹ 253 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ರೂಪಿಸಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೆಪಿಟಿಸಿಎಲ್ ಜಲಸಂಗ್ರಹಣಾ ಕೆರೆಯಿಂದ ಅಲ್ಲಿಪುರ ಕೆರೆಗೆ ನೀರು ಹರಿಸುವ ಯೋಜನೆಯ ಅಂದಾಜುಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ; ಆ ಯೋಜನೆ ಜಾರಿಯಾದರೆ ಬಳ್ಳಾರಿ ನಗರಕ್ಕೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಅನುಮೋದನೆ ದೊರಕಿದ್ದು, ಮೊದಲ ಹಂತದಲ್ಲಿ ಸಿವಿಲ್ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ದೊರಕಿದೆ. ಅದರನ್ವಯ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಯನ್ನು ಶುರು ಮಾಡಲಾಗಿದೆ’ ಎಂದು ತಿಳಿಸಿದರು.

‘ಎರಡನೇ ಹಂತದಲ್ಲಿ ಕಸವಿಲೇವಾರಿ, ವೈಜ್ಞಾನಿಕ ಸಂಸ್ಕರಣೆ ಹಾಗೂ ಕಸ ಸಂಬಂಧಿತ ಕಾರ್ಯಗಳಿಗಾಗಿ ಯಂತ್ರಗಳನ್ನು ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಕಸವನ್ನು ಘಟಕದಲ್ಲಿ ವಿಂಗಡಿಸಿ ಗೊಬ್ಬರವನ್ನಾಗಿ ತಯಾರಿಸಿ ರೈತರಿಗೆ ನೀಡುವುದಷ್ಟೇ ಅಲ್ಲದೆ, ಉದ್ಯಾನಗಳ ಅಭಿವೃದ್ಧಿಗೂ ಬಳಸಲಾಗುವುದು’ ಎಂದರು. ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ, ಮುಖಂಡರಾದ ವೀರಶೇಖರರೆಡ್ಡಿ, ಶ್ರೀನಿವಾಸ ಮೋತ್ಕರ್ ಇದ್ದರು.

‘ಬಳ್ಳಾರಿ ಕರ್ನಾಟಕದ್ದೇ’
‘ಜಿಲ್ಲೆಯ ವಿಭಜನೆಯಿಂದಾಗಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕು ಎಂಬ ಕೂಗು ಅಲ್ಲಲ್ಲಿ ಕೇಳಿಬಂದಿದೆ. ಆದರೆ ಎಂದೆಂದಿಗೂ ಬಳ್ಳಾರಿ ಕರ್ನಾಟಕದ್ದೇ ಆಗಿರಲಿದೆ’ ಎಂದು ಶಾಸಕ ಸೋಮಶೇಖರ ರೆಡ್ಡಿ ಪ್ರತಿಪಾದಿಸಿದರು.‘ವಿಭಜನೆಯಿಂದಾಗಿ ಬಳ್ಳಾರಿ ಗಡಿ ಭಾಗದಲ್ಲಿ ಬಿಕ್ಕಟ್ಟು ಸಂಭವಿಸಬಹುದು ಎಂದು ಮುಖ್ಯಮಂತ್ರಿಯ ಗಮನ ಸೆಳೆದಿದ್ದೆವು. ಆದರೆ ಅವರು ಸಚಿವ ಆನಂದ್‌ಸಿಂಗ್‌ ಅವರ ಮಾತು ಕೇಳಿಕೊಂಡು ವಿಭಜನೆಯ ನಿರ್ಧಾರ ಕೈಗೊಂಡರು’ ಎಂದು ದೂರಿದರು.ಬಳ್ಳಾರಿಯ ಇತಿಹಾಸವನ್ನು ನೋಡಿದರೆ ಕಡಪ, ಕರ್ನೂಲು ಜಿಲ್ಲೆಗಳಲ್ಲಿರುವ ಬಹುತೇಕ ತಾಲೂಕುಗಳು ಹಳೇ ಬಳ್ಳಾರಿ ಜಿಲ್ಲೆಗೇ ಸೇರಿದ್ದವು ಎಂಬುದನ್ನು ಮರೆಯುವಂತಿಲ್ಲ’ ಎಂದರು.

ಅಂಕಿ ಅಂಶ
₹ 28 ಕೋಟಿ:
ಘನತ್ಯಾಜ್ಯ ವಿಲೇವಾರಿ ಯೋಜನೆ ಮೊತ್ತ
₹ 12.96 ಕೋಟಿ: ವಿಲೇವಾರಿ ಘಟಕ ನಿರ್ಮಾಣ ವೆಚ್ಚ
₹ 15 ಕೋಟಿ: ಯಂತ್ರೋಪಕರಣಗಳ ಖರೀದಿ ವೆಚ್ಚ
84 ಎಕರೆ: ಘಟಕದ ವಿಸ್ತೀರ್ಣ
160 ಟನ್: ನಗರದಲ್ಲಿ ದಿನವೂ ಉತ್ಪತ್ತಿಯಾಗುವ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.