ADVERTISEMENT

ಎಸ್‌ಪಿವಿ ನಿಧಿ: ನ್ಯಾ. ಬಿ. ಸುದರ್ಶನರೆಡ್ಡಿ ಸಮಿತಿಗೆ ಮನವಿ ಸಲ್ಲಿಸಿದ ಎಸ್‌ಪಿಎ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:23 IST
Last Updated 1 ಆಗಸ್ಟ್ 2022, 14:23 IST

ಬಳ್ಳಾರಿ: ಗಣಿ ಬಾಧಿತ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ವಿಶೇಷ ಉದ್ದೇಶದ ನಿಧಿಯನ್ನು (ಎಸ್‌ಪಿವಿ) ನಿರ್ದಿಷ್ಟ ಉದ್ದೇಶಕ್ಕೆ ಬಳಸುವಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ನೇತೃತ್ವದ ’ಓವರ್‌ಸೈಟ್‌ ಅಥಾರಿಟಿ‘ಗೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ ಮನವಿ ಮಾಡಿದ್ದಾರೆ.

ಸಮಾಜ ಪರಿವರ್ತನಾ ಸಮುದಾಯದ ಸುದೀರ್ಘ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್‌ ನ್ಯಾ. ಸುದರ್ಶನರೆಡ್ಡಿ ನೇತೃತ್ವದಲ್ಲಿ ಓವರ್‌ಸೈಟ್‌ ಅಥಾರಿಟಿ ಸ್ಥಾಪಿಸಿದೆ. ಈ ಅಥಾರಿಟಿ ಈಗಾಗಲೇ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಎರಡು ಸಭೆಗಳನ್ನು ನಡೆಸಿದ್ದು, ಈ ಸಭೆಗಳಿಗೆ ಹಾಜರಾಗಿ ಮನವಿ ಸಲ್ಲಿಸಿರುವುದಾಗಿ ಹಿರೇಮಠ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ದೇಶದಲ್ಲೇ ದೊಡ್ಡ ಹಗರಣ. ಈ ಹಗರಣದ ಸಂಬಂಧದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್‌ 2013ರಲ್ಲಿ ನೀಡಿದೆ. ನಮ್ಮ ಬೇಡಿಕೆಯಂತೆ ವಿಶೇಷ ಉದ್ದೇಶದ ನಿಧಿ ಸ್ಥಾಪಿಸಿದೆ. ಈ ನಿಧಿಯಲ್ಲಿ ಸದ್ಯ 18 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹ ಆಗಿದೆ ಎಂದು ಅವರು ವಿವರಿಸಿದರು.

ADVERTISEMENT

ಎಸ್‌ಪಿವಿ ನಿಧಿಯನ್ನು ಅಕ್ರಮ ಗಣಿಗಾರಿಕೆಯಿಂದ ಹಾಳಾಗಿರುವ ಪರಿಸರ ಪುನಶ್ಚೇತನಕ್ಕೆ ಬಳಸಬೇಕು. ಗಣಿಗಾರಿಕೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನರ ಆರೋಗ್ಯ ಸುಧಾರಣೆ, ಶಿಕ್ಷಣ ಕ್ಷೇತ್ರ ಹಾಗೂ ಸಂಪನ್ಮೂಲ ಅಭಿವೃದ್ಧಿಗೆ ಬಳಸಬೇಕು ಎಂದು ಅವರು ಸಲಹೆ ಮಾಡಿದರು.

ನ್ಯಾ. ಸುದರ್ಶನರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸುವ ಮೂಲಕ ಸುಪ್ರೀಂ ಕೋರ್ಟ್‌ ಅತ್ಯುತ್ತಮ ತೀರ್ಮಾನ ಕೈಗೊಂಡಿದೆ. ಅತ್ಯುನ್ನತ ಕೋರ್ಟ್‌ನ ಈ ತೀರ್ಮಾನವನ್ನು ತಾವು ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸ್ವಾಗತಿಸುವುದಾಗಿ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.