ADVERTISEMENT

ಸಿರುಗುಪ್ಪ: ಸೌಕರ್ಯವಿಲ್ಲದ ಮಾರುಕಟ್ಟೆ;ರೈತರು, ವ್ಯಾಪಾರಿಗಳು, ಸಾರ್ವಜನಿಕರ ಪರದಾಟ

ಸಿರುಗುಪ್ಪ ದಿನದ ತರಕಾರಿ ಮಾರುಕಟ್ಟೆಯಲ್ಲಿ ಅವ್ಯವಸ್ಥೆ| ರೈತರು, ವ್ಯಾಪಾರಿಗಳು, ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:03 IST
Last Updated 25 ಆಗಸ್ಟ್ 2025, 5:03 IST
ಸಿರುಗಪ್ಪದ ದಿನದ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಉಳಿದಿರುವುದು
ಸಿರುಗಪ್ಪದ ದಿನದ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಉಳಿದಿರುವುದು   

ಸಿರುಗುಪ್ಪ: ಪಟ್ಟಣದಲ್ಲಿರುವ ದಿನದ ಮಾರುಕಟ್ಟೆಯು ನಗರಸಭೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಸೊರಗುತ್ತಿದೆ. ವ್ಯಾಪಾರಸ್ಥರು ಮತ್ತು ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ಕೃಷಿ ಉತ್ಪನ್ನಗಳನ್ನು ಇಲ್ಲಿಗೆ ತರುತ್ತಾರೆ. ವ್ಯಾಪಾರಿಗಳು ತಮ್ಮ ಸರಕುಗಳೊಂದಿಗೆ ಬರುತ್ತಾರೆ. ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಎಲ್ಲಾ ವರ್ಗಗಳ ಜನರು ಬರುತ್ತಾರೆ. ಆದರೆ ಇಂಥ ಸಮೃದ್ಧ ವ್ಯಾಪಾರ ಚಟುವಟಿಕೆಯ ಕೇಂದ್ರವಾದ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಮಾರುಕಟ್ಟೆಯಲ್ಲಿ ಸ್ವಚ್ಛತೆ, ಶೌಚಾಲಯ, ನೀರು ಮತ್ತು ವಿದ್ಯುತ್ ಸೌಲಭ್ಯಗಳ ಕೊರತೆ ಇದೆ. ಮಳೆ ಬಂದರೆ ಫಜೀತಿ ಹೇಳತೀರದು. ಬಿಸಿಲಿನಲ್ಲಿ ತರಕಾರಿ ಒಣಗುತ್ತಿವೆ.

ADVERTISEMENT

ಮಾರುಕಟ್ಟೆಗಳಲ್ಲಿ ಸರಿಯಾದ ಸ್ಥಳಾವಕಾಶವಿಲ್ಲದೇ ಇರುವುದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ವ್ಯಾಪಾರಿಗಳು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ. ವ್ಯಾಪಾರಿಗಳಿಗೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ತ್ಯಾಜ್ಯ ಪದಾರ್ಥವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಹಂದಿಗಳ ಕಾಟ ಮಿತಿಮೀರಿದೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲೇ ನೀರು ನಿಂತು ಸೊಳ್ಳೆಗಳ ಕಾಟ ವಿಪರೀತವಾಗಿದೆ. 

ಕಲುಷಿತ ವಾತಾವರಣ ಮತ್ತು ಮೂಲಸೌಲಭ್ಯ ಕೊರತೆಯಿಂದಾಗಿ ಗ್ರಾಹಕರು ಮಾರುಕಟ್ಟೆಯಲ್ಲಿ ಪರದಾಡುತ್ತಿದ್ದಾರೆ. ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ಸುತ್ತಲ ಜಾಗದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.  ಸೂಕ್ತವಾದ ಪಾದಚಾರಿ ಮಾರ್ಗ ಇಲ್ಲದ ಕಾರಣ ಅಪಾಯದ ನಡುವೆಯೇ ಜನರೂ, ವಾಹನಗಳೂ ರಸ್ತೆಯ ಮೇಲೆಯೇ ಸಾಗಬೇಕಾಗಿದೆ. 

ಅಧಿಕಾರಿಗಳ ನಿರ್ಲಕ್ಷ್ಯ: ನಗರಸಭೆಯವರು ಮಾರುಕಟ್ಟೆಗಳ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ಪ್ರತಿ ಅಂಗಡಿಗಳಿಂದ ಸುಂಕ ವಸೂಲಿ ಮಾಡಲಾಗುತ್ತದೆ. ಆದರೂ ವ್ಯಾಪಾರಕ್ಕೆ ಸೂಕ್ತ ಸ್ಥಳ ಒದಗಿಸಿಲ್ಲ. ಸೌಲಭ್ಯವೂ ಇಲ್ಲ ಎಂಬಂತಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. 

ಪ್ಲಾಸ್ಟಿಕ್ ವಿಲೇವಾರಿ ಸಮಸ್ಯೆ

ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಚಾಲ್ತಿಯಲ್ಲಿದೆ. ಬಳಸಿದ ನಂತರ ಅದರ ವಿಲೇವಾರಿಗೂ ವ್ಯವಸ್ಥೆ ಇಲ್ಲ. ಇದೂ ಕೂಡ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಎಸೆಯಲಾಗುತ್ತಿರುವ ಪ್ಲಾಸ್ಟಿಕ್‌ ಕೊನೆಗೆ ಚರಂಡಿ ಸೇರುತ್ತಿದೆ. ಮಾರುಕಟ್ಟೆಯಲ್ಲಿನ ಪ್ಲಾಸ್ಟಿಕ್‌ ಕವರ್‌ಗಳನ್ನು ಜಾನುವಾರುಗಳು ತಿನ್ನುತ್ತಿವೆ. ಪಟ್ಟಣದ ವಿವಿಧ ಓಣಿಗಳಲ್ಲಿ ಒಣಕಸದ ಜೊತೆಗೆ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಲಾಗುತ್ತಿದೆ ಎಂಬ ದೂರುಗಳು ಕೂಡ ಇವೆ.

‘ಪಟ್ಟಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂಬ ಮಾತುಗಳನ್ನು ಮೂರು ದಶಕಗಳಿಂದಲೂ ಕೇಳುತ್ತಿದ್ದೇವೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು’ ಎಂದು ತರಕಾರಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸಿರುಗಪ್ಪದ ದಿನದ ಮಾರುಕಟ್ಟೆಯ ರಸ್ತೆ ಕೆಸರು ಕೊಳಕಿನಿಂದ ಆವೃತವಾಗಿರುವುದು
ಸಿರುಗಪ್ಪದ ದಿನದ ಮಾರುಕಟ್ಟೆಯಲ್ಲಿ ಮಳಿಕೆಗಳು ಬಳಕೆಯಾಗದೇ ಉಳಿದಿರುವುದು
ಗಂಗಾಧರ
ಯಲ್ಲಪ್ಪ
ಉದ್ಘಾಟನೆ ಮಾಡದ ಕಟ್ಟಡಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಟ್ಟಡ ನೆಲಸಮಗೊಳಿಸಿ ಮುಕ್ತ ಮಾರುಕಟ್ಟೆ ಮಾಡಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ
ಗಂಗಾಧರ ಪೌರಾಯುಕ್ತ ನಗರಸಭೆ ಸಿರುಗುಪ್ಪ
ನಗರಸಭೆ ಮತ್ತು ಅಧಿಕಾರಿಗಳು ಮಾರುಕಟ್ಟೆ ಅಭಿವೃದ್ಧಿಗೆ ಗಮನ ಹರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು
ಯಲ್ಲಪ್ಪ ಸ್ಥಳೀಯ ನಿವಾಸಿ ಸಿರುಗುಪ್ಪ.

ಪ್ಲಾಸ್ಟಿಕ್ ವಿಲೇವಾರಿ ಬಹುದೊಡ್ಡ ಸಮಸ್ಯೆ

ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಚಾಲ್ತಿಯಲ್ಲಿದೆ. ಬಳಸಿದ ನಂತರ ಅದರ ವಿಲೇವಾರಿಗೂ ವ್ಯವಸ್ಥೆ ಇಲ್ಲ. ಇದೂ ಕೂಡ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಎಸೆಯಲಾಗುತ್ತಿರುವ ಪ್ಲಾಸ್ಟಿಕ್‌ ಕೊನೆಗೆ ಚರಂಡಿ ಸೇರುತ್ತಿದೆ. ಮಾರುಕಟ್ಟೆಯಲ್ಲಿನ ಪ್ಲಾಸ್ಟಿಕ್‌ ಕವರ್‌ಗಳನ್ನು ಜಾನುವಾರುಗಳು ತಿನ್ನುತ್ತಿವೆ. ಪಟ್ಟಣದ ವಿವಿಧ ಓಣಿಗಳಲ್ಲಿ ಒಣಕಸದ ಜೊತೆಗೆ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಲಾಗುತ್ತಿದೆ ಎಂಬ ದೂರುಗಳು ಕೂಡ ಇವೆ. ‘ಪಟ್ಟಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂಬ ಮಾತುಗಳನ್ನು ಮೂರು ದಶಕಗಳಿಂದಲೂ ಕೇಳುತ್ತಿದ್ದೇವೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು’ ಎಂದು ತರಕಾರಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.