ADVERTISEMENT

ಕುರುಗೋಡು: ಬಿಡಾಡಿ ದನಗಳ ಹಾವಳಿ: ಹೈರಾಣಾದ ಜನ

ಸಮಸ್ಯೆಗೆ ಸಿಲುಕಿರುವ ವಾಹನ ಸವಾರರು, ವರ್ತಕರು

ವಾಗೀಶ ಕುರುಗೋಡು
Published 1 ಏಪ್ರಿಲ್ 2024, 5:14 IST
Last Updated 1 ಏಪ್ರಿಲ್ 2024, 5:14 IST
ಕುರುಗೋಡಿನ ಬಾದನಹಟ್ಟ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಕಾಳಗದಲ್ಲಿ ತೊಡಗಿ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವ ಗೂಳಿಗಳು
ಕುರುಗೋಡಿನ ಬಾದನಹಟ್ಟ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಕಾಳಗದಲ್ಲಿ ತೊಡಗಿ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವ ಗೂಳಿಗಳು    

ಕುರುಗೋಡು: ಬಿಡಾಡಿ ದನಗಳ ಹಾವಳಿಯಿಂದ ಪಟ್ಟಣದಲ್ಲಿ ವಾಹನ ಸವಾರರು ಮತ್ತು ವರ್ತಕರು ಸಮಸ್ಯೆಗೆ ಸಿಲುಕಿದ್ದಾರೆ. ರಸ್ತೆಗಳಲ್ಲಿ ಗುಂಪುಗುಂಪಾಗಿ ಸಂಚರಿಸಿ ತೊಂದರೆ ಕೊಡುವ ಗೋವುಗಳು, ಆಹಾರಕ್ಕಾಗಿ ದಿನಸಿ ಮತ್ತು ತರಕಾರಿ ಅಂಗಡಿಗಳಿಗೆ ನುಗ್ಗುತ್ತಿವೆ.

ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಒಪ್ಪಿಸುವ ಗೋವುಗಳಿಗೆ ಸೂಕ್ತ ರಕ್ಷಣೆಯಿಲ್ಲದೆ ಬಿಡಾಡಿ ದನಗಳಾಗಿ ಪರಿವರ್ತನೆಗೊಂಡಿವೆ.

ಹರಕೆಯ ಗೋವುಗಳ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ದೇವಸ್ಥಾನದ್ದಾಗಿದ್ದರೂ ಅವರು ಈ ಬಗ್ಗೆ ಗಮನಹರಿಸದೇ ಇರುವುದರಿಂದ ಅವು ಹೊಟ್ಟೆ ತುಂಬಿಸಿಕೊಳ್ಳಲು ಜನರಿಗೆ ತೊಂದರೆ ಕೊಡುತ್ತ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿವೆ.

ADVERTISEMENT

‘ಬಿಡಾಡಿ ದನಗಳ ಜತೆಗೆ ಹರಕೆಯ ಹಸುಗಳೂ ಸೇರಿದ ಪರಿಣಾಮ, ಅವುಗಳ ಸಂಖ್ಯೆ ವೃದ್ಧಿಸುತ್ತಿವೆ. ಸಮಸ್ಯೆಯೂ ಉಲ್ಬಣಗೊಂಡಿದೆ. ಮುಜರಾಯಿ ಇಲಾಖೆ ಹರಕೆಯ ಗೋವುಗಳ ಪಾಲನೆಗೆ ಮುಂದಾಗದ ಪರಿಣಾಮ ಅನಾಥವಾಗಿ ಅಲೆದಾಡುವಂತಾಗಿದೆ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ತರಕಾರಿ ವ್ಯಾಪಾರಿ ಮತ್ತು ದಿನಸಿ ಅಂಗಡಿಗಳಿಗೆ ಲಗ್ಗೆ ಇಡುತ್ತಿರುವ ದನಗಳು ಗ್ರಾಹಕರ ಕೈಯಲ್ಲಿರುವ ವಸ್ತುಗಳನ್ನು ಏಕಾಏಕಿ ಬಾಯಿ ಹಾಕಿ ತೊಂದರೆ ನೀಡುತ್ತಿವೆ. ಇದರಿಂದ ಗ್ರಾಹಕರ ಜತೆ ವರ್ತಕರೂ ಬೇಸರಗೊಂಡಿದ್ದಾರೆ. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಗುಂಪುಗುಂಪಾಗಿ ಮನೆಗಳಿಗೆ ಲಗ್ಗೆ ಇಡುತ್ತಿರುವ ಬಿಡಾಡಿ ದನಗಳು ಚಿಕ್ಕಮಕ್ಕಳಿಗೆ, ದೊಡ್ಡವರಿಗೆ ತೊಂದರೆ ಕೊಡುತ್ತಿವೆ.

ಮುಖ್ಯರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಿರಮಿಸುವ ದನಕರುಗಳಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಏಕಾಏಕಿ ಅಡ್ಡ ಬರುವುದರಿಂದ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳೂ ಜರುಗಿವೆ.

‘ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಒಪ್ಪಿಸುವ ಹಸುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಆದರೆ ಅವುಗಳು ಸೂಕ್ತ ನಿರ್ವಹಣೆ ಇಲ್ಲದೆ ನರಕಯಾತನೆ ಅನುಭವಿಸುತ್ತಿವೆ. ಅವುಗಳ ಸಂರಕ್ಷಣೆಗೆ ಮುಜರಾಯಿ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಪುರಸಭೆ ಸದಸ್ಯ ಶೇಖಣ್ಣ ಒತ್ತಾಯಿಸಿದ್ದಾರೆ.

ಮೇವು ನೀರು ಇಲ್ಲ ಪ್ಲಾಸ್ಟಿಕ್ ವಸ್ತುಗಳೇ ಎಲ್ಲ

ಹಸುಗಳಿಗೆ ಮೇವು ನೀರು ದೊರೆಯದ ಕಾರಣ ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ವಸ್ತುಗಳು ಕಾಗದ ಕಸಕಡ್ಡಿ ಸೇವಿಸಿ ಅನಾರೋಗಕ್ಕೆ ಈಡಾಗುತ್ತಿವೆ. ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳನ್ನು ಸೇವಿಸಿ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ದೇವಸ್ಥಾನದ ಗೂಳಿಯನ್ನು ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗೀರ್ ಪಶುವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. 30 ಕೆ.ಜಿ. ಪ್ಲಾಸ್ಟಿಕ್ ವಸ್ತುಗಳನ್ನು ಹೊರ ತೆಗೆದು ಜೀವ ಉಳಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಗೂಳಿಗೆ ಸೂಕ್ತ ಆರೈಕೆ ಸಿಗದೆ ಇತ್ತೀಚೆಗೆ ಮೃತಪಟ್ಟಿದೆ.

ಯಾರು ಏನಂದರು?

ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ ಬಿಡುವ ಹಸುಗಳಿಗೆ ಮೇವು ನೀರು ದೊರೆಯುತ್ತಿಲ್ಲ. ಹಸಿವು ಮತ್ತು ಬಿಸಿಲಿನ ಪ್ರಖರತೆಯಿಂದ ಸಾಯುತ್ತಿವೆ. ಅವುಗಳಿಗೆ ರಕ್ಷಣೆ ನೀಡಬೇಕು – ಎಚ್.ಎಂ.ವಿಶ್ವನಾಥ ಸ್ವಾಮಿ ಕುರುಗೋಡು

ಆರೈಕೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬಿಡಾಡಿ ಮತ್ತು ಹರಕೆಯ ದನಕರುಗಳ ರಕ್ಷಣೆಗಾಗಿ ಸರ್ಕಾರಿ ಜಮೀನು ಹಂಚಿಕೆ ಮಾಡಿದರೆ ಗೋಶಾಲೆ ತೆರೆಯಲು – ಸಿದ್ಧ ಚೇಗೂರು ಷಣ್ಮುಖ ಕುರುಗೋಡು

ಸವಾರರಿಗೆ ವ್ಯಾಪಾರಿಗಳಿಗೆ ಅಂಗಡಿ ಗ್ರಾಹಕರಿಗೆ ತೊಂದರೆ ಕೊಡುವ ದನಕರುಗಳನ್ನು ಒಂದೆಡೆ ಸೇರಿಸಿ ನಿರ್ವಹಣೆ ಮಾಡುವಂತೆ ಪುರಸಭೆ ಮುಖಾಧಿಕಾರಿ ಮತ್ತು ದೇಸ್ಥಾನದ ಕಾರ್ಯನಿರ್ವಾಹಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ – ಗೋವಿಂದಪ್ಪ ಸ್ಥಳೀಯ ನಿವಾಸಿ

ಜಿಲ್ಲೆಗೆ ಒಂದರಂತೆ ಗೋಶಾಲೆ ತೆರೆಯುವುದು ಸರ್ಕಾರದ ನಿಯಮ. ತಾಲ್ಲೂಕಿಗೊಂದು ಗೋಶಾಲೆ ತೆರೆಯಲು ಸರ್ಕಾರ ಅನುಮತಿ ನೀಡಿದರೆ ಕುರುಗೋಡಿಗೆ ಮೊದಲ ಆದ್ಯತೆ ನೀಡಲಾಗುವುದು – ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿ

ಸರ್ಕಾರಿ ಜಮೀನು ಗುರುತಿಸಿ ಗೋಶಾಲೆಗಾಗಿ ಕಾಯ್ದಿರಿಸಲಾಗುವುದು– ಎಂ.ರೇಣುಕಾ ತಹಶೀಲ್ದಾರ್

ಕುರುಗೋಡಿನ ಬಳ್ಳಾರಿ ಮುಖ್ಯರಸ್ತೆಯಲ್ಲಿ ಮುಕ್ತವಾಗಿ ಸಂಚರಿಸುತ್ತಿರುವ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ತೊಂದರೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.