ADVERTISEMENT

ಬಳ್ಳಾರಿ: ಶುದ್ಧ ನೀರಿಗಾಗಿ ಸ್ವಚ್ಛತೆ, ಸಮೀಕ್ಷೆ, ಪರೀಕ್ಷೆ

ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕಲುಷಿತ ನೀರು ಪೂರೈಕೆ ತಡೆಯಲು ಜಿಲ್ಲಾ ಪಂಚಾಯಿತಿ ಕ್ರಮ

ಆರ್. ಹರಿಶಂಕರ್
Published 27 ಜೂನ್ 2025, 5:07 IST
Last Updated 27 ಜೂನ್ 2025, 5:07 IST
ಬಳ್ಳಾರಿ ಜಿಲ್ಲೆಯ ಮೆಟ್ರಿ ಗ್ರಾಮದ ನೀರು ಪೂರೈಕೆ ಟ್ಯಾಂಕ್‌ವೊಂದನ್ನು ಅನ್ನು ಸ್ವಚ್ಛಗೊಳಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ 
ಬಳ್ಳಾರಿ ಜಿಲ್ಲೆಯ ಮೆಟ್ರಿ ಗ್ರಾಮದ ನೀರು ಪೂರೈಕೆ ಟ್ಯಾಂಕ್‌ವೊಂದನ್ನು ಅನ್ನು ಸ್ವಚ್ಛಗೊಳಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ    

ಬಳ್ಳಾರಿ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರವಾಗಿ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದನ್ನು ತಡೆಯಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ ಇದಕ್ಕಾಗಿ ಜಲ ಮೂಲಗಳ ಸಮೀಕ್ಷೆ, ಪರೀಕ್ಷೆ ಆರಂಭಿಸಿದೆ. 

ಜಲಮೂಲಗಳಿಗೆ ಕಲುಷಿತ ನೀರು ಸೇರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳು ಜೂನ್‌  18ರಂದು ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳು, ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು,  ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಸಭೆ ನಡೆಸಿದ್ದರು.  

ಗ್ರಾಮೀಣ ಭಾಗದ ನೀರಿನ ಎಲ್ಲಾ ಮೂಲಗಳು, ಸಿಸ್ಟರ್ನ್‌, ಕುಡಿಯುವ ನೀರಿನ ಕೆರೆಗಳು, ಆರ್‌ಒ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿ, ಸರ್ವೆ ಮಾಡಿ ವರದಿಯನ್ನು 10 ದಿನಗಳಲ್ಲಿ ಸಲ್ಲಿಸಲು  ಪಿಡಿಒಗಳಿಗೆ,  ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದರು.

ADVERTISEMENT

ಇದರ ಜತೆಗೆ, ಜಲಮೂಲಗಳಲ್ಲಿ ಶೇಖರಣೆಯಾಗಿರುವ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಲು ಮಾಡಲು ಗುರಿ ನಿಗದಿಪಡಿಸಿದ್ದರು. ಅದರಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಮತ್ತು ಇತರ ಅಧಿಕಾರಿಗಳು ಜಲ ಮೂಲಗಳ ಪರೀಕ್ಷೆ ನಡೆಸುತ್ತಿದ್ದಾರೆ.  

ಜಿಲ್ಲೆಯಲ್ಲಿ ಈ ವರೆಗೆ 100 ಗ್ರಾಮ ಪಂಚಾಯಿತಿ, 551 ಜಲ ಮೂಲಗಳ ಸರ್ವೆ ಮಾಡಲಾಗಿದೆ. ಇದರಲ್ಲಿ ಸಿಸ್ಟರ್ನ್‌ಗಳು 45, ಕೈ ಪಂಪ್‌–30, ಒಎಚ್‌ಟಿ (ಓವರ್‌ ಹೆಡ್ ಟ್ಯಾಂಕ್‌) 169, ತೆರೆದ ಬಾವಿ –1, ಆರ್‌.ಒ ಘಟಕ 104, ಕೊಳವೆಬಾವಿಗಳು 202 ಸೇರಿವೆ. 

ಪ್ರತಿಯೊಂದು ಮೂಲದಿಂದ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಜಿಲ್ಲಾ ಪಂಚಾಯಿತಿಯ ಪ್ರಯೋಗಾಲಯ ಮತ್ತು ಆರೋಗ್ಯ ಕೇಂದ್ರಗಳ ಪ್ರಯೋಗಾಲಯಗಳಿಗೆ ಪರೀಕ್ಷೆಗೆಂದು ಕಳುಹಿಸಲಾಗುತ್ತಿದೆ. ಜತೆಗೆ, ಸೋರಿಕೆ ತಡೆಗಟ್ಟಲು ರಿಪೇರಿಗಳನ್ನು ಮಾಡಲಾಗಿದೆ. ಕೊಳವೆಗಳು ತುಕ್ಕು ಹಿಡಿದಿದ್ದರೆ ಅವುಗಳನ್ನು ಬದಲಿಸಲಾಗಿದೆ. ತೆರೆದ ಓಎಚ್‌ಟಿಗಳಿಗೆ ಮುಚ್ಚಳ ಅಳವಡಿಸಲಾಗಿದೆ. 

‘ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರು, ಕಲುಷಿತ ನೀರಿನೊಂದಿಗೆ ಮಿಶ್ರಣವಾಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಸರ್ಕಾರದ ನಿರ್ದೇಶನಕ್ಕೆ ಕಾಯದೇ ಈಗಾಗಲೇ ಒಂದೂವರೆ ತಿಂಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಆಗ 50 ಕಡೆ ಸಮಸ್ಯೆ ಇರುವುದು ಗೊತ್ತಾಗಿತ್ತು. 46 ಮೂಲಗಳನ್ನು ಸರಿಪಡಿಸಿದ್ದೇವೆ. ಕ್ಲೋರಿನೇಷನ್‌ ಮಾಡಿದ್ದೇವೆ.  ಅದರ ಮುಂದುವರಿದ ಭಾಗವಾಗಿ ಈ ಸಮೀಕ್ಷೆ, ಪರೀಕ್ಷೆ ಕಾರ್ಯ ಆರಂಭವಾಗಿದೆ. ಹಿಂದೆಲ್ಲ ಜಲಮೂಲಗಳ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ಸರ್ಕಾರವೂ 200 ಮೂಲಗಳ ಪರೀಕ್ಷೆ ಗುರಿ ನೀಡುತ್ತಿತ್ತು. ಆದರೆ, ಈ ಬಾರಿ ನಾವು  ಎಲ್ಲವನ್ನೂ ಪರೀಕ್ಷೆ ಮಾಡಲೇ ಬೇಕು ಎಂದು ನಿರ್ಧರಿಸಿ ಕೆಲಸ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.  

ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು. ಕಲುಷಿತ ನೀರು ಮಿಶ್ರಣ ತಡೆಗಟ್ಟಬೇಕು ಎಂಬುದು ಸರ್ಕಾರದ ನಿಲುವು. ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತಿದೆ. 
– ಮೊಹಮದ್‌ ಹ್ಯಾರಿಸ್‌ ಸಮೇರ್‌ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ

ಬಳ್ಳಾರಿಯ ಮಾದರಿ ಹೆಜ್ಜೆ

‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜಲಮೂಲಗಳನ್ನು 10 ದಿನಗಳ ಒಳಗಾಗಿ ಸಮೀಕ್ಷೆ ನಡೆಸಬೇಕು ಎಂದು ಆರಂಭದಲ್ಲಿ ನಿರ್ಧರಿಸಲಾಯಿತು. ಆದರೆ ಹತ್ತು ದಿನಗಳಲ್ಲಿ ಸಮೀಕ್ಷೆ ಪೂರ್ಣ ಮಾಡಲಾಗದು ಎಂಬ ಅಭಿಪ್ರಾಯ ಕೇಳಿ ಬಂತು. ಆದ್ದರಿಂದಲೇ ಇತರ ಇಲಾಖೆಯ ನೆರವನ್ನೂ ತೆಗೆದುಕೊಳ್ಳಲಾಯಿತು. ಪಿಡಿಒ ಎಂಜಿನಿಯರ್‌ಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡ ರಚಿಸಿದ್ದೇವೆ. ಇವರೆಲ್ಲರ ಸಮನ್ವಯದಿಂದ  ಸಮೀಕ್ಷೆ ಚೆನ್ನಾಗಿ ನಡೆಯುತ್ತಿದೆ. ಶುದ್ಧ ಕುಡಿಯುವ ನೀರಿನ ಲಭ್ಯತೆ ಮತ್ತು ಕಲುಷಿತ ನೀರು ಮಿಶ್ರಣ ತಡೆಗಟ್ಟುವ ಕುರಿತು ತಿಂಗಳಿಗೆ ಒಂದಾದರೂ ಸಭೆ ನಡೆಸಿ ಪರಿಶೀಲಿಸಬೇಕು ಎಂದು ಸರ್ಕಾರ ಹೇಳಿದೆ. ಆದರೆ ಅದಕ್ಕಿಂತಲೂ ಹೆಚ್ಚು ಸಭೆಗಳನ್ನು ಬಳ್ಳಾರಿಯಲ್ಲಿ ಮಾಡಲಾಗಿದೆ. ಇದು ರಾಜ್ಯದಲ್ಲೇ ಮಾದರಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.