ಮರಿಯಮ್ಮನಹಳ್ಳಿ: ಶ್ರೀರಾಮನವಮಿಯಂದು ನಡೆಯಲಿರುವ ಪಟ್ಟಣದ ಆರಾಧ್ಯ ದೈವ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ನೂತನ ಜೋಡಿ ರಥಗಳನ್ನು ಮಂಗಳವಾರ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಗಳು ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಬೆಳಿಗ್ಗೆ 10ಕ್ಕೆ ದೇವಸ್ಥಾನಕ್ಕೆ ಬಂದ ಶ್ರೀಗಳು ಮೊದಲು, ಒಂದು ಗಂಟೆ ಕಾಲ ಶ್ರೀಲಕ್ಷ್ಮಿ ನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವರುಗಳಿಗೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ 12ಕ್ಕೆ ಸುಮಾರು ₹ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಜೋಡಿ ರಥಗಳಿಗೆ ಪ್ರೋಕ್ಷಣೆ ಮಾಡಿ, ತುಳಸೀ ಮಾಲೆ ಹಾಕಿ ಪುಷ್ಪಾರ್ಚನೆ ಮಾಡಿದರು.
ನಂತರ ರಥಗಳ ಮೇಲೆ ಮೂಲರಾಮನ ವಿಗ್ರಹಗಳನಿಟ್ಟು ಪೂಜೆ ಸಲ್ಲಿಸಿ ಮಂಗಳಾರತಿ ಮಾಡುವ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಜಯಘೋಷ ಕೂಗಿದರು.
ಅನುಗ್ರಹ ಸಂದೇಶ: ನೂತನ ಜೋಡಿ ರಥಗಳ ಉದ್ಘಾಟನೆಗೆ ಮುಂಚಿತವಾಗಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ನೂತನ ರಥಗಳ ನಿರ್ಮಾಣಕ್ಕೆ ಹಾಗೂ ದೇವಸ್ಥಾನದ ನವೀಕರಣಕ್ಕೆ ಮುತುವರ್ಜಿ ತೋರಿದ ಜಿಲ್ಲಾಧಿಕಾರಿಗಳು, ಶಾಸಕ ನೇಮರಾಜ ನಾಯ್ಕ, ದಾನಿಗಳಾದ ಶ್ಯಾಂರಾಜ್‍ಸಿಂಗ್, ಜಯರಾಜ್ ಸಿಂಗ್, ಅಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಎಲ್ಲ ಭಕ್ತರು ಹಾಗೂ ವಿವಿಧ ಸಮಾಜದವರು ದೇಣಿಗೆ ನೀಡಿ ತೋರಿದ ಸಹಕಾರ ಶ್ಲಾಘನೀಯ ಕಾರ್ಯ ಎಂದರು.
ನಂತರ ನೂತನ ಜೋಡಿ ರಥಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ ಶಾಸಕ ನೇಮರಾಜ ನಾಯ್ಕ, ದಾನಿಗಳಾದ ಶ್ಯಾಂರಾಜ್‍ಸಿಂಗ್, ಜಯರಾಜ್ ಸಿಂಗ್ ಅವರ ಕುಟುಂಬದವರು ಸೇರಿದಂತೆ ಎಲ್ಲ ದಾನಿಗಳನ್ನು ಶ್ರೀಗಳು ಸತ್ಕರಿಸಿದರು. ಕಿನ್ನಾಳ ಆಗಮದವರಾದ ವೇದವ್ಯಾಸಾಚಾರ್ಯ, ಶಾಸಕ ಕೆ.ನೇಮರಾಜ ನಾಯ್ಕ, ಅಭಿವೃದ್ಧಿ ಸಮಿತಿಯ ಸದಸ್ಯ ಸಿ.ಸತೀಶ್, ದೇವಸ್ಥಾನ ಹಾಗೂ ರಥಗಳ ವಿನ್ಯಾಸಕಾರ ರಾಜಶೇಖರ ಹೆಬ್ಬಾರ್ ಮಾತನಾಡಿದರು.
ಅಭಿವೃದ್ಧಿ ಸಮಿತಿಯ ಸದಸ್ಯರಾದ ಗೋವಿಂದರ ಪರಶುರಾಮ, ದೊಡ್ಡ ರಾಮಣ್ಣ, ಚಿಕ್ಕಿ ನಾಗೇಶ್, ಎಲೆಗಾರ ಮಂಜುನಾಥ, ಈ.ಎರಿಸ್ವಾಮಿ, ಸಜ್ಜದ ವಿಶ್ವನಾಥ, ಸಣ್ಣ ದುರುಗಪ್ಪ, ರುದ್ರಮುನಿ, ನರಸಿಂಹಮೂರ್ತಿ, ಯು.ವೆಂಕಟೇಶ್, ಕೆ.ರಘುವೀರ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಸೇರಿದಂತೆ ಮುಖಂಡರು, ಜನಪ್ರತಿನಿಧಿಗಳು ಹಾಗೂ ದಾನಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.