ತೆಕ್ಕಲಕೋಟೆ: ಸಮೀಪದ ಗೋಸಬಾಳು ಗ್ರಾಮದ ಶ್ರೀಮರಿಲಿಂಗೇಶ್ವರ (ಮರಿಗುದುರೇಶ್ವರ) ದೇವರ ಮನೆ ನಿರ್ಮಾಣ ಹಾಗೂ ಕುದುರೆ ಮೂರ್ತಿ ದೇವರನ್ನು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸೋಮವಾರ ಮೂರು ಗುಂಪುಗಳ ನಡುವೆ ವಾದ ವಿವಾದ ನಡೆದು ಕೆಲಕಾಲ ಉದ್ದಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಈ ಸಮಯದಲ್ಲಿ ಯುವಕನೊಬ್ಬ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆಯೂ ನಡೆಯಿತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮಹಿಳೆಯರು ಮರಿಗುದುರೇಶ್ವರ ಹಾಗೂ ಕುದುರೆ ದೇವರ ಮೂರ್ತಿ ಹಳೆಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಅವಕಾಶ ಮಾಡಿಕೊಡುವಂತೆ ಪೊಲೀಸರ ಜತೆಗೆ ವಾಗ್ವಾದಕ್ಕಿಳಿದರು.
ಇದೇ ಸಂದರ್ಭದಲ್ಲಿ ಮೇಟಿ ಗೌಡ್ರ ಹಾಗೂ ಶಾನಭೋಗರ ಗುಂಪು ಹೊಸ ದೇವಸ್ಥಾನ ನಿರ್ಮಾಣಕ್ಕೆ ಅನುವುಮಾಡಿಕೊಡಬೇಕು ಹಾಗೂ ಅಲ್ಲಿವರೆಗೆ ದೇವಸ್ಥಾನದಿಂದ ಮೂರ್ತಿಗಳನ್ನು ತೆಗೆಯಬಾರದು ಎಂದು ಒತ್ತಾಯಿಸಿದರು.
ಬಿಗಿಬಂದೋಬಸ್ತ್: ಸಿರುಗುಪ್ಪ ಡಿವೈಎಸ್ ಪಿ ಸಂತೋಷ ಚೌಹಾನ್, ಸಿಪಿಐ ಹನುಮಂತಪ್ಪ, ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್, ಪಿಎಸ್ ಐ ಕುಮಾರ ಸ್ವಾಮಿ, ಸಿರಿಗೇರಿ ಪಿಎಸ್‌ಐ ಸದ್ದಾಂಹುಸೇನ್ ಸೇರಿದಂತೆ 20 ಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದು ಪರಿಸ್ಥಿತಿ ತಿಳಿಗೊಳಿಸಿದರು.
Cut-off box - ವಿವಾದಕ್ಕೆ ಕಾರಣ ಏನು? ಗೋಸಬಾಳು ಗ್ರಾಮದ ಶ್ರೀ ಮರಿಲಿಂಗೇಶ್ವರ (ಮರಿಗುದುರೇಶ್ವರ)ದೇವರ ಮನೆಯ ಮೇಟಿಗಳಾದ ಶಾನಭೋಗರ ಮೇಟಿ ಪೂಜಾರಿ ಮೇಟಿ ಮೇಟೆಗೌಡ ಮೇಟಿ ದೇವರ ಮನೆ ನಿರ್ಮಾಣಕ್ಕಾಗಿ ಸರ್ವಾನುಮತದಿಂದ ಮರಿಗುದುರೇಶ್ವರ ದೇವರ ಮೂರ್ತಿ ಹಾಗೂ ಕುದುರೆ ದೇವರ ಮೂರ್ತಿಯನ್ನು ಬೀರಲಿಂಗೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದರು. ತನಂತರ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೇಟಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಇದರಿಂದ ಸದರಿ ದೇವರನ್ನು ಗುರುವಿನ ಸಿದ್ದಲಿಂಗಪ್ಪನ ಮನೆಯ ಎದುರಿಗೆ ಇರುವ ದೇವಸ್ಥಾನಕ್ಕೆ ಮೂಲ ಕುದುರೆ ದೇವರ ಮೂರ್ತಿಯನ್ನು ಬೀರಲಿಂಗಗೇಶ್ವರ ದೇವಸ್ಥಾನದಿಂದ ವಾಪಾಸ್ಸು ತಂದು ಇಡಲು ಹಾಗೂ ಯಥಾಸ್ಥಿತಿಯನ್ನು ಕಾಪಾಡಲು ಸಿರುಗುಪ್ಪ ತಹಶೀಲ್ದಾರ್ ಗೌಸಿಯಾ ಬೇಗಂ ಸೂಚಿಸಿದ್ದರು. ಅದರಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮೂರು ಗುಂಪುಗಳ ನಡುವೆ ಕೈ ಕೈ ಮಿಲಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.