ADVERTISEMENT

ಕಲ್ಲೇಶ್ವರ ದೇಗುಲ ಗೋಪುರ ಧ್ವಂಸ ಪ್ರಕರಣ: 5 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 7:31 IST
Last Updated 14 ನವೆಂಬರ್ 2021, 7:31 IST
ಅಂಜಿನಪ್ಪ
ಅಂಜಿನಪ್ಪ   

ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿಯ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ಗೋಪುರ ಕಳಸವನ್ನು ನಿಧಿಗಳ್ಳರು ಧ್ವಂಸಗೊಳಿಸಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಆರೋಪಿಗಳಾದ ಹರಪನಹಳ್ಳಿ ತಾಲ್ಲೂಕು ಮಾಡ್ಲಿಗೇರಿಯ ಅಂಜಿನಪ್ಪ (60), ಹೂವಿನಹಡಗಲಿ ತಾಲ್ಲೂಕು ಹಿರೇಕೊಳಚಿಯ ಚಮನ್ ಸಾಬ್, (45), ಹುಲಿಕಟ್ಟಿಯ ತಿರುಕಪ್ಪ (45), ಕೊಟ್ರಪ್ಪ (45), ಮಾನ್ಯರಮಸಲವಾಡದ ಬಸವರಾಜ (36) ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನು ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಅ.30ರ ತಡರಾತ್ರಿ ಕಲ್ಲೇಶ್ವರ ದೇಗುಲ ಗೋಪುರ ಮೇಲ್ಭಾಗದಲ್ಲಿ ಆರೋಪಿಗಳು ಅಂಜನಾ ಪ್ರಯೋಗ ನಡೆಸಿ ನಿಧಿಗಾಗಿ ಶೋಧ ನಡೆಸಿದ್ದರು. ನಿಧಿ ಇರುವ ಶಂಕೆಯಿಂದ ಗೋಪುರದ ಶಿಲಾ ಸ್ತೂಪವನ್ನು ನೆಲಕ್ಕೆ ಕೆಡವಿ, ಒಡೆದು ಹಾಕಿದ್ದರು. ಪುರಾತತ್ವ ಇಲಾಖೆ ಅಧಿಕಾರಿ ಶಾಹಿದಾಬಾನು ನೀಡಿದ ದೂರಿನ ಮೇರೆಗೆ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಆರೋಪಿಗಳ ಪತ್ತೆಗಾಗಿ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ರಮೇಶ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿಎಸ್ಐ ದಾದಾವಲಿ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಬಂಧಿತ ಆರೋಪಿಗಳಿಂದ ಕೃತ್ಯ ಎಸಗಲು ಬಳಸಿದ ಕಬ್ಬಿಣದ ಹಾರೆ, ಸುತ್ತಿಗೆ, ಚಾಣ ಹಾಗೂ ಅಂಜನಾ ಹಾಕುವ ಡಬ್ಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.