ADVERTISEMENT

ಪ್ರವಾಹ: ಕಂಪ್ಲಿ– ಗಂಗಾವತಿ ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:44 IST
Last Updated 20 ಆಗಸ್ಟ್ 2025, 5:44 IST
ಕಂಪ್ಲಿ ತಾಲ್ಲೂಕು ಸಣಾಪುರ-ಇಟಗಿ ಗ್ರಾಮ ಸಂಪರ್ಕದ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ಪ್ರವೇಶಿಸಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ
ಕಂಪ್ಲಿ ತಾಲ್ಲೂಕು ಸಣಾಪುರ-ಇಟಗಿ ಗ್ರಾಮ ಸಂಪರ್ಕದ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ಪ್ರವೇಶಿಸಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ   

ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶ ಬಳಿಯ ತುಂಗಭದ್ರಾ ನದಿಗೆ ಜಲಾಶಯದಿಂದ ಸುಮಾರು 1.20 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ವಿವಿಧೆಡೆ ಜಲಾವೃತ, ಜನಜೀವನ ಅಸ್ತವ್ಯಸ್ತ, ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತ ಮಂಗಳವಾರವು ಮುಂದುವರಿದಿದೆ.

ನದಿ ಭರ್ತಿಯಾಗಿ ಹರಿಯುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಬಾಳೆ, ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಕೋಟೆ ಬನವಾಸಿ ರಸ್ತೆಗೆ ನದಿ ನೀರು ನುಸಿಳಿರುವುದರಿಂದ ಹೊಲ, ಗದ್ದೆಗಳಿಗೆ ನೀರಿನಲ್ಲಿಯೇ ನಡೆದುಕೊಂಡು ಹೋಗುವಂಥ ಪರಿಸ್ಥಿತಿ ರೈತರಿಗೆ ಎದುರಾಗಿದೆ.

ಕೋಟೆ ಗಂಗಮ್ಮನ ಕಟ್ಟೆ, ನದಿ ದಂಡೆ ಪಕ್ಕದ ರುದ್ರಭೂಮಿಗೆ ತೆರಳುವ ರಸ್ತೆಯಲ್ಲಿ ಪ್ರವಾಹದ ನೀರು ಸಂಗ್ರಹವಾಗಿದೆ. ಹೊಳೆ ಆಂಜನೇಯಸ್ವಾಮಿ ದೇವಸ್ಥಾನ, ಕೋಟೆ ಮಾಧವ ತೀರ್ಥರ ವೃಂದಾವನ ಜಲಾವೃತವಾಗಿದೆ. ಕಂಪ್ಲಿ-ಸಿರುಗುಪ್ಪ ಹೆದ್ದಾರಿಯ ಸಣಾಪುರ-ಇಟಗಿ ಗ್ರಾಮ ಸಂಪರ್ಕದ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ಪ್ರವೇಶಿಸಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ.

ADVERTISEMENT

ಸೇತುವೆ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹೊಸ ಬಸ್ ನಿಲ್ದಾಣ ಮತ್ತು ವಾಲ್ಮೀಕಿ ವೃತ್ತದ ಬಳಿ ಚೆಕ್‌ಪೋಸ್ಟ್ ತೆರೆದಿದ್ದು, ಸೇತುವೆ ಕಡೆ ವಾಹನ ಸಂಚರಿಸದಂತೆ ತೀವ್ರ ನಿಗಾವಹಿಸಿದ್ದಾರೆ.

‘ನದಿಗೆ ಇನ್ನು ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಲ್ಲಿ ನದಿ ಪಾತ್ರದ ಕೆಲ ಮೀನುಗಾರ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಂತರಿಸಲಾಗುವುದು’ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದರು.

ತೆಪ್ಪದಲ್ಲಿ ಮೃತದೇಹ ಕೊಂಡೊಯ್ದು ಅಂತ್ಯಕ್ರಿಯೆ

ಕಂಪ್ಲಿ ಕೋಟೆ ವ್ಯಾಪ್ತಿಯ ನದಿ ದಂಡೆ ಪಕ್ಕದ ಸ್ಮಶಾನಕ್ಕೆ ತೆರಳುವ ರಸ್ತೆಗೆ ಪ್ರವಾಹ ನೀರು ನುಗ್ಗಿದ್ದು ಅಂತ್ಯಕ್ರಿಯೆಗೆ ಹರಸಾಹಸ ಪಡುವಂತಾಗಿದೆ. ಪಟ್ಟಣದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದವರು ಸೋಮವಾರ ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿ ಅಂತಿಮ ವಿಧಿವಿಧಾನ ನೆರವೇರಿಸಿದರು.

ಪ್ರವಾಹ ಬಂದಾಗಲೆಲ್ಲ ಈ ರೀತಿ ಕಷ್ಟಪಟ್ಟು ಕುಟುಂಬದ ಕೆಲವೇ ಕೆಲವರು ತೆರಳಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸ್ಮಶಾನಕ್ಕೆ ಹೋಗುವ ರಸ್ತೆಗೆ ಪ್ರವಾಹ ನೀರು ನುಗ್ಗದಂತೆ ಮತ್ತು ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು.

ಕಂಪ್ಲಿ ಕೋಟೆ ಪ್ರದೇಶದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ
ಕಂಪ್ಲಿ ಕೋಟೆ ವ್ಯಾಪ್ತಿಯ ನದಿ ದಂಡೆ ಪಕ್ಕದ ರುದ್ರಭೂಮಿಗೆ ತೆರಳುವ ರಸ್ತೆಯಲ್ಲಿ ಪ್ರವಾಹದ ನೀರು ಸಂಗ್ರಹವಾಗಿದೆ
ಕಂಪ್ಲಿ ತುಂಗಭದ್ರಾ ನದಿಗೆ ಜಲಾಶಯದಿಂದ ಅಧಿಕ ನೀರು ಹರಿದು ಬರುತ್ತಿದ್ದು ಸಂಪರ್ಕ ಸೇತುವೆ ಮುಳುಗಡೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.