
ಕೂಡ್ಲಿಗಿ: ಬಹುತೇಕ ಬಡಪೀಡಿತ ಎಂದೇ ಹೆಸರಾದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ತುಂಗಭಧ್ರಾ ನದಿಯ ನೀರು ಹರಿಸುವುದಕ್ಕ ಚಾಲನೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಇಲ್ಲಿ ಜನರ ಬಹುದಿನಗಳ ಕನಸನ್ನು ನನಸು ಮಾಡಲಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ಯೋಜನೆ ಇದೀಗ ಪೂರ್ಣಗೊಂಡಿದ್ದು, ಲೋಕಾರ್ಪಣೆಯ ಮೂಲಕ ಜನರ ಹೃದಯ ಗೆಲ್ಲುವ ಕೆಲಸಕ್ಕೆ ಸಿಎಂ ಮುಂದಾಗಿದ್ದಾರೆ. ಇದಕ್ಕೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ.
ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಶಾಸಕರ ಜನ ಸಂಪರ್ಕ ಕಚೇರಿ ಬಳಿ ಈ ಕಾರ್ಯಕ್ರಮ ನಡೆಯಲಿದ್ದು, ಜತೆಯಲ್ಲಿ ₹1,250 ಕೋಟಿ ವೆಚ್ಚದ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ಮುಖ್ಯಮಂತ್ರಿ ಅವರು ಮಾಡಲಿದ್ದಾರೆ.
₹619.42 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಯೋಜನೆಗಾಗಿ ಹೂವಿನಹಡಗಲಿ ತಾಲ್ಲೂಕಿನ ರಾಜವಾಳ ಗ್ರಾಮದ ಹತ್ತಿರ ತುಂಗಭದ್ರಾ ನದಿಯ ದಡದಲ್ಲಿ ಪಂಪ್‌ಹೌಸ್ ನಿರ್ಮಿಸಿ 1.44 ಟಿಎಂಸಿ ಅಡಿ ನೀರನ್ನು ಪಂಪ್ ಮಾಡಲಾಗುತ್ತದೆ. ಮುಖ್ಯ ರೈಸಿಂಗ್ ಮೇನ್‍ನಲ್ಲಿ 1,688 ಎಂ.ಎಂ. ರಿಂದ 1,670 ಎಂ.ಎಂ. ವ್ಯಾಸದವರೆಗಿನ ಎಂ.ಎಸ್ ಪೈಪುಗಳನ್ನು 66.29 ಕಿ.ಮೀ ಉದ್ದ ಆಳವಡಿಸಲಾಗಿದೆ.
ಕಾಮಗಾರಿ ಎರಡು ಹಂತಗಳಲ್ಲಿದ್ದು, ಮೊದಲನೇ ಹಂತದಲ್ಲಿ 11 ಕೆರೆಗಳಿಗೆ ನೇರವಾಗಿ ನೀರು ಹರಿಯಲಿದ್ದು, ಎರಡನೇ ಹಂತದಲ್ಲಿ ತಾಲ್ಲೂಕಿನ ಪಾಲಯ್ಯನಕೋಟೆ (ಸುಂಕದಕಲ್ಲು) ಗ್ರಾಮದ ಹತ್ತಿರ ಪಂಪ್ ಹೌಸ್ ನಿರ್ಮಿಸಿ 1.02 ಟಿಎಂಸಿ ಅಡಿ ನೀರನ್ನು 58 ಕೆರೆಗಳಿಗೆ ಹರಿಸಲಾಗುತ್ತದೆ. ಈ ಯೋಜನೆಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗಲಿದ್ದು, ಅಂತರ್ಜಲ ಮಟ್ಟ ಹೆಚ್ಚಲು ಅನುಕೂಲವಾಗಲಿದೆ.
2021ರ ಜುಲೈನಲ್ಲಿ ಅಂದಿನ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅನುದಾನ ಬಿಡುಗಡೆ ಮಾಡಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಿದ್ದರು. 2023ರ ವಿಧಾನಸಭಾ ಚುನಾವಣೆಯ ನಂತರ ಕಾಮಗಾರಿಗೆ ಚುರುಕು ನೀಡಿದ ಈಗಿನ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಜನರ ಬಹು ವರ್ಷಗಳ ಕನಸು ನನಸಾಗುವಂತೆ ಮಾಡಿದ್ದಾರೆ.
ವಸ್ತು ಪ್ರದರ್ಶನ: ಕಾರ್ಯಕ್ರಮ ನಡೆಯುವ ಸ್ಥಳ ಸೇರಿದಂತೆ ಪಟ್ಟಣದಲ್ಲಿ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಕಾರ್ಯಕ್ರಮದಲ್ಲಿ ಸೆಳೆಯಲು ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು, ಜನರಿಗೆ ಸಿಕ್ಕ ಪ್ರಯೋಜನಗಳು ಹಾಗೂ ಅದರ ಉಪಯೋಗಗಳು ಕುರಿತು ಜನರಿಗೆ ತಿಳಿಸಲು ವಸ್ತು ಪ್ರದರ್ಶನದ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ.
ಬಂದೋಬಸ್ತಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ: ಕಾರ್ಯಕ್ರಮದ ಬಂದೋಬಸ್ತಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ನೇತೃತ್ವದಲ್ಲಿ ಎಎಸ್ಪಿ-4, ಡಿವೈಎಸ್ಪಿ-6, ಸಿಪಿಐ-30, ಪಿಎಸೈ-67, ಎಎಸೈ-128, ಪೊಲೀಸ್ ಸಿಬ್ಬಂದಿ-651, ಮಹಿಳಾ ಸಿಬ್ಬಂದಿ-93, ಗೃಹ ರಕ್ಷಕ ದಳದ 545 ಜನ ಸೇರಿದಂತೆ 4 ಕೆಎಸ್‍ಆರ್‌ಪಿ ಹಾಗೂ 1 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಕೂಡ್ಲಿಗಿಯ ದೊಡ್ಡ ಕಾರ್ಯಕ್ರಮ
ಕೂಡ್ಲಿಗಿಯಂತಹ ತಾಲ್ಲೂಕು ಕೇಂದ್ರಕ್ಕೆ ಸ್ವತಃ ಮುಖ್ಯಮಂತ್ರಿ ಅವರೇ ಬಂದು ಯೋಜನೆ ಉದ್ಘಾಟಿಸುವುದು ತೀರಾ ಅಪರೂಪದ ಸನ್ನಿವೇಶ. ಇದೀಗ ಅಂತಹ ಅವಕಾಶ ಕೂಡ್ಲಿಗಿಗೆ ಒದಗಿಬಂದಿದೆ. ಸಹಜವಾಗಿಯೇ ಸ್ಥಳೀಯ ಶಾಸಕರಿಗೆ ಇದೊಂದು ಬಹುದೊಡ್ಡ ಕಾರ್ಯಕ್ರಮವಾಗಿದ್ದು ಇದಕ್ಕೆ ತಕ್ಕಂತೆ ಶ್ರೀನಿವಾಸ್ ಅವರು ಸಹ ಸರ್ಕಾರದಿಂದ ಇನ್ನಷ್ಟು ಅನುದಾನ ತರಿಸಿಕೊಳ್ಳಲು ಯತ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.