ADVERTISEMENT

ಹಗರಿಬೊಮ್ಮನಹಳ್ಳಿ: ಯೂರಿಯಾ ರಸಗೊಬ್ಬರಕ್ಕಾಗಿ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:49 IST
Last Updated 22 ಜುಲೈ 2025, 2:49 IST
ಹಗರಿಬೊಮ್ಮನಹಳ್ಳಿಯ ರಸಗೊಬ್ಬರ ಅಂಗಡಿಯೊಂದರ ಮುಂದೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಜಮಾಯಿಸಿರುವುದು
ಹಗರಿಬೊಮ್ಮನಹಳ್ಳಿಯ ರಸಗೊಬ್ಬರ ಅಂಗಡಿಯೊಂದರ ಮುಂದೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಜಮಾಯಿಸಿರುವುದು   

ಹಗರಿಬೊಮ್ಮನಹಳ್ಳಿ: ಪಟ್ಟಣದ ಗೊಬ್ಬರದ ಅಂಗಡಿಗಳ ಮುಂದೆ ಯೂರಿಯಾ ರಸಗೊಬ್ಬರಕ್ಕಾಗಿ ಸೋಮವಾರ ರೈತರ ನೂಕುನುಗ್ಗಲು ಉಂಟಾಯಿತು.

ಬೆಳಗಿನ ಜಾವದಿಂದಲೇ ಗೊಬ್ಬರಕ್ಕಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ಮತ್ತು ರೈತ ಮಹಿಳೆಯರು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಆಧಾರ್ ಕಾರ್ಡ್‍ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ 12 ಗಂಟೆಯವರೆಗೂ ಅಂಗಡಿಗಳ ಮಾಲೀಕರಿಂದ ಸರಿಯಾದ ಪ್ರತಿಕ್ರಿಯೆ ಬಾರದೆ ರೈತರಲ್ಲಿ ಗೊಂದಲ ಮೂಡಿಸಿತು. ಆಗ ಪರಸ್ಪರ ನೂಕುನುಗ್ಗಲು ನಡೆಸಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಪೊಲೀಸರನ್ನು ಕರೆಯಿಸಿದದೂ, ಗೊಂದಲ ಬಗೆಹರಿಯಲಿಲ್ಲ. ಬಳಿಕ ಕೆಲವು ರೈತರಿಗೆ ತಲಾ 2 ಚೀಲಗಳಂತೆ ಗೊಬ್ಬರ ವಿತರಿಸಲು ಟೋಕನ್ ವಿತರಿಸಲಾಯಿತು. ಕೆಲವರಿಗೆ ಮಾತ್ರ ಗೊಬ್ಬರ ದೊರೆಯಿತು, ಇನ್ನೂ ಕೆಲವರು ಗೊಬ್ಬರ ಸಿಗದೆ ನಿರಾಶೆಯಿಂದ ಗ್ರಾಮಗಳಿಗೆ ಹಿಂತಿರುಗಿದರು.

ADVERTISEMENT

ತಾಲ್ಲೂಕಿನಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ ಮೆಕ್ಕೇಜೋಳ 35ಸಾವಿರ ಹೆಕ್ಟೇರ್, ಸಜ್ಜೆ 1180ಹೆಕ್ಟೇರ್ ಬಿತ್ತನೆಯಾಗಿದೆ. ಜುಲೈ ತಿಂಗಳವರೆಗೂ ಅಂದಾಜು 5800ಟನ್ ರಸಗೊಬ್ಬರ ಅಗತ್ಯ ಇದೆ, ಇಲ್ಲಿಯವರೆಗೂ 5100ಟನ್ ಪೂರೈಕೆ ಆಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ರೈತರಿಗೆ ಅಗತ್ಯವಾದ ಯೂರಿಯಾವನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು. ಯೂರಿಯಾ ಇಲ್ಲದೆ ಉತ್ತಮ ಇಳುವರಿಗೆ ಬಾರದು ಎನ್ನುತ್ತಾರೆ ಸೊನ್ನ ಗ್ರಾಮದ ರೈತ ಮೈಲಪ್ಪ.

ಕಳೆದ 20 ದಿನಗಳಿಂದ ಮಳೆಯಾಗಿರಲಿಲ್ಲ, ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ದಿಢೀರ್ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಬೆಳೆಗಳಿಗೆ ಈಗ 2ರಿಂದ ಎರಡೂವರೆ ತಿಂಗಳಿದ್ದು, ಯೂರಿಯಾ ರಸಗೊಬ್ಬರ ಅಗತ್ಯವಾಗಿ ಬೇಕಾಗಿದೆ. ಈಗ ಮೂರು ದಿನಗಳಿಂದ ಯೂರಿಯಾಕ್ಕಾಗಿ ಅಲೆದಾರೂ ಸಿಗುತ್ತಿಲ್ಲ. 5 ಎಕರೆ ಮೆಕ್ಕೇಜೋಳ ಬಿತ್ತನೆ ಮಾಡಿದ್ದು, 10 ಚೀಲ ಯೂರಿಯಾ ಬೇಕು. ಇನ್ನೊಂದು ವಾರ ತಡೆದರೆ ಯೂರಿಯಾ ಅಗತ್ಯ ಇಲ್ಲ ಎಂದು ವಲ್ಲಭಾಪುರದ ರೈತ ಗವಿಸಿದ್ದಪ್ಪ ಹೇಳಿದರು.

ಅನಾವಶ್ಯಕ ಗೊಂದಲ ಬೇಡ

ದೊಡ್ಡ ರೈತರು ಸೆಪ್ಟೆಂಬರ್ ತಿಂಗಳಿಗೆ ಬೇಕಾದ ಯೂರಿಯಾ ಸಂಗ್ರಹ ಮಾಡಿದ್ದಾರೆ. ಅತಿ ಸಣ್ಣ ರೈತರಿಗೆ ಈಗ ಯೂರಿಯಾ ಅಗತ್ಯ ಇದೆ. ಜುಲೈ 17ರಿಂದ 19ರವರೆಗೂ 700 ಜನ ರೈತರಿಗೆ ಯೂರಿಯಾ ವಿತರಣೆ ಮಾಡಲಾಗಿದೆ. ರೈತರು ಅನಾವಶ್ಯಕ ಗೊಂದಲಕ್ಕೆ ಬೀಳಬಾರದು. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಮಾಡಬಾರದು. ನ್ಯಾನೊ ಯೂರಿಯಾ ಸಿಂಪಡಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಸುನಿಲ್‍ಕುಮಾರ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.