ADVERTISEMENT

ಐ.ಬಿ.ಗೆ ವಾಸ್ತು ದೋಷ, ಪ್ರವೇಶದ್ವಾರ ಬದಲು!

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 15:56 IST
Last Updated 3 ಜುಲೈ 2018, 15:56 IST
ಹೂವಿನಹಡಗಲಿ ಪ್ರವಾಸಿ ಮಂದಿರ ಆವರಣದಲ್ಲಿರುವ ನೂತನ ಅತಿಥಿಗೃಹ ಕಟ್ಟಡದ ಪ್ರವೇಶ ದ್ವಾರವನ್ನು ಒಡೆದು ಬೇರೆಡೆ ಅಳವಡಿಸಿರುವುದು
ಹೂವಿನಹಡಗಲಿ ಪ್ರವಾಸಿ ಮಂದಿರ ಆವರಣದಲ್ಲಿರುವ ನೂತನ ಅತಿಥಿಗೃಹ ಕಟ್ಟಡದ ಪ್ರವೇಶ ದ್ವಾರವನ್ನು ಒಡೆದು ಬೇರೆಡೆ ಅಳವಡಿಸಿರುವುದು   

ಹೂವಿನಹಡಗಲಿ: ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅತಿಥಿ ಗೃಹ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾಸ್ತು ಕಾರಣಕ್ಕೆ ಒಡೆದು ಪ್ರವೇಶ ದ್ವಾರವನ್ನು ಬದಲಿಸಿದ್ದಾರೆ.

2012ರಲ್ಲಿ ನಿರ್ಮಾಣಗೊಂಡಿರುವ ಅತಿಥಿಗೃಹ ಕೆಳಮಹಡಿ ಹಾಗೂ ಮೊದಲ ಮಹಡಿ ಕಟ್ಟಡವನ್ನು ಆಧುನಿಕ ಶೈಲಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಕೆಳ ಮಹಡಿಯಲ್ಲಿ ಆಹಾರ ಸೇವಿಸುವ ಹಾಲ್‌ ಇದ್ದರೆ, ಮೊದಲ ಮಹಡಿಯಲ್ಲಿ ಗಣ್ಯರ ವಾಸ್ತವ್ಯ ಕೊಠಡಿಗಳಿವೆ.

ಕೆಳ ಮಹಡಿಯ ಕೊಠಡಿಯನ್ನು ಸಣ್ಣ ಸಭೆಗಳಿಗೆ ಉಪಯೋಗಿಸಲಾಗುತ್ತಿತ್ತು. ಅಲ್ಲಿ ಮುಖ್ಯಸ್ಥರು ಕೂರುವ ಆಸನಗಳು ದಕ್ಷಿಣಾಭಿಮುಖವಾಗಿ ಮತ್ತು ಕೈ ತೊಳೆಯುವ ನೀರಿನ ತೊಟ್ಟಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಳವಡಿಸಲಾಗಿತ್ತು. ವಾಸ್ತು ಪ್ರಕಾರ ಅವು ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದು ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಒಡೆದು ಮಾರ್ಪಾಡುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಮುಖ್ಯ ಪ್ರವೇಶ ದ್ವಾರವನ್ನು ತೆಗೆದು ಕಿಟಕಿ ಇದ್ದ ಈಶಾನ್ಯ ದಿಕ್ಕಿನಲ್ಲಿ ಅಳವಡಿಸಲಾಗಿದೆ. ಬಾಗಿಲು ಇದ್ದ ಜಾಗಕ್ಕೆ ಇಟಕಿ ಬಂದಿದೆ. ಹಾಲ್‌ ಒಳಗಡೆ ಇರುವ ಮುಖ್ಯಸ್ಥರ ಆಸನವನ್ನು ಉತ್ತರಾಭಿಮುಖವಾಗಿ ಅಳವಡಿಸಲಾಗಿದೆ. ಸಿಂಕ್‌ನ್ನು ವಾಯವ್ಯ ದಿಕ್ಕಿನಲ್ಲಿ ಕೂರಿಸಲಾಗಿದೆ.

‘ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ವಾಸ್ತು ದೋಷ ನೆಪದಲ್ಲಿ ಒಡೆದು ನವೀಕರಣ ಮಾಡಲು ಸರ್ಕಾರದ ಹಣವನ್ನು ಖರ್ಚು ಮಾಡಲಾಗುತ್ತಿದೆ. ವಾಸ್ತು ಕಾರಣಕ್ಕಾಗಿ ಯಾವುದೇ ಸರ್ಕಾರಿ ಕಟ್ಟಡಗಳನ್ನು ಒಡೆದು ದುರಸ್ತಿ ಮಾಡಬಾರದು ಎಂದು ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಇಲ್ಲಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಆದೇಶ ಲೆಕ್ಕಕ್ಕಿಲ್ಲದಂತಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.