ADVERTISEMENT

ಹೊಸಪೇಟೆ | ಶೇ 7ಕ್ಕೆ ಮೀಸಲು ಹೆಚ್ಚಿಸಲು ಆಗ್ರಹಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 8:49 IST
Last Updated 6 ಜೂನ್ 2019, 8:49 IST
   

ಹೊಸಪೇಟೆ: ಮೀಸಲು ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದವರು ಗುರುವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ರ್‍ಯಾಲಿ ಪ್ರಮುಖ ಮಾರ್ಗಗಳ ಮೂಲಕ ಹಾದು ರೋಟರಿ ವೃತ್ತದಲ್ಲಿ ಕೊನೆಗೊಂಡಿತು. ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42 ಲಕ್ಷಕ್ಕೂ ಅಧಿಕವಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 6.95ರಷ್ಟು ಈ ವರ್ಗಕ್ಕೆ ಸೇರಿದವರಿದ್ದಾರೆ. ಬಡ್ತಿ, ಶಿಕ್ಷಣದಲ್ಲಿ ಶೇ 3ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹಾಗಾಗಿ ಮೀಸಲು ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಕೆಲವು ಮುಂದುವರೆದ ವರ್ಗದವರು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ ಅನರ್ಹರಿಗೆ ಪ್ರಮಾಣ ಪತ್ರ ಸಿಗದಂತೆ ನೋಡಿಕೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯದಲ್ಲಿ ಒಟ್ಟು 50 ಬುಡಕಟ್ಟು ಗುಂಪುಗಳನ್ನು ಪರಿಶಿಷ್ಟ ವರ್ಗವೆಂದು ಅಧಿಸೂಚಿಸಲಾಗಿದೆ. ಪ್ರತಿ ಬುಡಕಟ್ಟು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಹೊಂದಿದೆ. ವಸತಿ, ಕೃಷಿ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಪೌಷ್ಟಿಕತೆ ಹೆಚ್ಚಿಸಲು ಪ್ರಾಮುಖ್ಯತೆ ಕೊಡಬೇಕಿದೆ. ಪ್ರತ್ಯೇಕ ಪರಿಶಿಷ್ಟ ವರ್ಗದ ಸಚಿವಾಲಯ ಸ್ಥಾಪಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಶಿವರಾಮ ಗುಜ್ಜಲ, ಕಾರ್ಯದರ್ಶಿ ಬಿ. ತಾಯಪ್ಪ ನಾಯಕ, ಖಜಾಂಚಿ ಬೆಳಗೋಡು ಯಮನೂರಪ್ಪ, ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ, ಜಂಬಯ್ಯ ನಾಯಕ, ಪೂಜಾರಿ ದುರ್ಗಪ್ಪ, ತಾರಿಹಳ್ಳಿ ವೆಂಕಟೇಶ, ಗುಜ್ಜಲ್‌ ನಿಂಗಪ್ಪ, ಪಿ. ವೆಂಕಟೇಶ, ಶ್ರೀಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.