ADVERTISEMENT

ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 12:32 IST
Last Updated 20 ಅಕ್ಟೋಬರ್ 2021, 12:32 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ(ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಸಂಘ ಸಂಸ್ಥೆಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ನುಡಿ ಕಟ್ಟಡದಲ್ಲಿ ವಾಲ್ಮೀಕಿ ಅಧ್ಯಯನ ಪೀಠದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ರಾಮಾಯಣದ ವಿಚಾರ, ಚಿಂತನೆಗಳನ್ನು ಚರ್ಚೆ ಮಾಡುವ ವಿಚಾರಗೋಷ್ಠಿ ನಡೆಯಬೇಕು. ಮನುಷ್ಯನಿಗೆ ಶಿಕ್ಷಣವನ್ನು ಕೊಡಿ. ಆಗ ಅವನಿಗೆ ಬೇಕಾದುದನ್ನು ಅವನು ಹುಡುಕಿ ಪಡೆಯುತ್ತಾನೆ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅದಕ್ಕೆ ನಿದರ್ಶನ ರಾಮಾಯಣ’ ಎಂದರು.

ADVERTISEMENT

ವಿಶ್ವವಿದ್ಯಾಲಯದ ಕುಲಸಚಿವ ಎ.ಸುಬ್ಬಣ್ಣ ರೈ ಮಾತನಾಡಿ, ‘ರಾಮಾಯಣ ಮರೆಯಲು ಸಾಧ್ಯವಿಲ್ಲ. ರಾಮಾಯಣ ಮತ್ತು ಮಹಾಭಾರತ ಕೇವಲ ಕಾವ್ಯಗಳಲ್ಲ. ಅವು ಮನುಕುಲದ ಇತಿಹಾಸ’ ಎಂದರು.
ಲಲಿತಕಲೆಗಳ ನಿಕಾಯದ ಡೀನ್ ಕೆ.ರವೀಂದ್ರನಾಥ, ಪೀಠದ ಸಂಚಾಲಕ ಅಮರೇಶ ಯತಗಲ್, ಉಪಕುಲಸಚಿವ ಎ.ವೆಂಕಟೇಶ್, ಸಂಶೋಧನಾ ವಿದ್ಯಾರ್ಥಿ ಸತೀಶ.ಬಿ ಇದ್ದರು.

ಉಪವಿಭಾಗಧಿಕಾರಿ, ತಹಶೀಲ್ದಾರ್‌ ಕಚೇರಿ:

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗ್ರೇಡ್ 2 ತಹಶೀಲ್ದಾರ್ ಪ್ರತಿಭಾ ಪುಷ್ಪ ಗೌರವ ಸಲ್ಲಿಸಿದರು. ಶಿರಸ್ತೇದಾರರಾದ ರಮೇಶ್, ಶ್ರೀಧರ್, ಆಹಾರ ಇಲಾಖೆಯ ಶಿರಸ್ತೇದಾರ ನಾಗರಾಜ, ಕಚೇರಿಯ ನವೀನ್ ಕುಮಾರ್, ಪ್ರಸನ್ನ, ಚನ್ನಮ್ಮ, ವಿಜಯ್ ಕುಮಾರ್, ಮಂಜುನಾಥ್, ಶಾರದಮ್ಮ ಇದ್ದರು.

ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕ:

ನಗರದ ಚಿತ್ರಕೇರಿಯಲ್ಲಿರುವ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಪಕ್ಷದ ಮುಖಂಡರು ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಮುಖಂಡ ಗುಜ್ಜಲ್ ನಾಗರಾಜ್‌, ‘ಸಚಿವ ಬಿ. ಶ್ರೀರಾಮುಲು ಮತ್ತು ರಾಜುಗೌಡ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿಯನ್ನು ವಾಲ್ಮೀಕಿ ಸಮಾಜಕ್ಕೆ ದೊರಕಿಸಿಕೊಡುವ ಭರವಸೆ ಕೊಟ್ಟಿದ್ದರು. ಎರಡು ವರ್ಷಗಳು ಕಳೆದರೂ ಆ ಕೆಲಸ ಮಾಡಲು ಸಾಧ್ಯವಾಗಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ಇಮಾಮ್ ನಿಯಾಜಿ, ಮುಖಂಡರಾದ ದೀಪಕ್ ಸಿಂಗ್, ಗೀತಾ ಯಾದವ್, ಸೋಮಪ್ಪ, ತಾರಿಹಳ್ಳಿ ಹನುಮಂತಪ್ಪ, ನಿಂಬಗಲ್ ರಾಮಕೃಷ್ಣ, ವಿನಯ್ ಶೆಟ್ಟರ್, ಎರ್ರಿಸ್ವಾಮಿ, ಎಚ್.ಅಣ್ಣಮಲೈ, ಸಿ.ಆರ್.ಭರತ್ ಕುಮಾರ್, ದಲ್ಲಾಳಿ ಕುಬೇರ ಇದ್ದರು.

ಪತಂಜಲಿ ಯೋಗ ಸಮಿತಿ:

ಉಪನ್ಯಾಸಕಿ ಟಿ.ಜಿ.ಎಂ. ನಾಗರತ್ನ ಮಾತನಾಡಿ, ‘ಭಾರತೀಯ ಸಮಾಜ-ಸಂಸ್ಕೃತಿಯನ್ನು ಅರಿತುಕೊಳ್ಳುವಲ್ಲಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ನಮಗೆ ಬಹುಮುಖ್ಯ ಗ್ರಂಥವಾಗಿದೆ. ಜೀವನಪ್ರೀತಿ, ಪ್ರಕೃತಿ ರಕ್ಷಣೆ, ನಿಸರ್ಗದ ರಮ್ಯತೆ, ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ, ಸರಸ-ವಿರಸ ಇವುಗಳೆಲ್ಲವನ್ನು ರಾಮಾಯಣವು ಉತ್ತಮವಾಗಿ ಪ್ರತಿಪಾದಿಸುತ್ತದೆ’ ಎಂದರು.

ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಯುವ ಭಾರತ್ ಸಂಘಟನೆಯ ರಾಜ್ಯಪ್ರಭಾರಿ ಕಿರಣಕುಮಾರ್, ವಡಕರಾಯ ಯೋಗ ಕೇಂದ್ರದ ಸಂಚಾಲಕ ಸತ್ಯಪ್ಪ, ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ, ಪಾಂಡುರಂಗರಾವ್, ಪೂಜಾ ಐಲಿ, ಮಹಿಳಾ ಸದಸ್ಯರಾದ ಮಂಗಳ, ಲಕ್ಷ್ಮಿ, ವಿಠೊಬಾ, ಶಿವಮೂರ್ತಿ, ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.