ಬಳ್ಳಾರಿ: ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ವಾಲ್ಮೀಕಿ ಸಮುದಾಯದ ಕೆಲ ಸಂಘಟನೆಗಳು ಹಾಕಿದ್ದ ಬ್ಯಾನರ್ ತೆರವು ಕಾರ್ಯಾಚರಣೆಯು ಸೋಮವಾರ ಗೊಂದಲಕ್ಕೆ, ವಾಗ್ವಾದಕ್ಕೆ ಗುರಿಯಾಯಿತು. ಅಂತಿಮವಾಗಿ ಪಾಲಿಕೆ ಇಬ್ಬರು ಅಧಿಕಾರಿಗಳ ಅಮಾನತಿಗೂ ಕಾರಣವಾಯಿತು.
ಬಳ್ಳಾರಿ ನಗರದ ವಿವಿಧ ವೃತ್ತಗಳಲ್ಲಿ, ರಸ್ತೆಗಳಲ್ಲಿ ವಾಲ್ಮೀಕಿ ಸಮುದಾಯದ ಸಂಘಟನೆಗಳು ಬ್ಯಾನರ್‌ಗಳನ್ನು ಅಳವಡಿಸಿವೆ. ಅದರಲ್ಲಿ ಕೆಲವನ್ನು ಪಾಲಿಕೆಯಿಂದ ಅನುಮತಿ ಪಡೆದು ಅಳವಡಿಸಿದ್ದರೆ, ಹಲವು ಬ್ಯಾನರ್‌ಗಳನ್ನು ಅನಧಿಕೃತವಾಗಿಯೂ ಹಾಕಲಾಗಿದೆ.
ಈ ಬ್ಯಾನರ್‌ಗಳಲ್ಲಿ ಕೆಲವನ್ನು ಪಾಲಿಕೆಯ ಅಧಿಕಾರಿಗಳು ಸೋಮವಾರ ತೆರವು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಘಟನೆಗಳ ಮುಖಂಡರು, ನಗರದ ಇಂದಿರಾ (ಸಂಗಂ) ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದವು.
‘ಬ್ಯಾನರ್ ತೆರವು ಹಿಂದೆ ರಾಜಕೀಯ ಪ್ರೇರಣೆ ಇದೆ. ತೆರವಾಗಿರುವ ಬ್ಯಾನರ್‌ಗಳನ್ನು ಮತ್ತೆ ಹಾಕಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವಿಷಯ ತಿಳಿದ ಪಾಲಿಕೆ ಆಯುಕ್ತ ಮಂಜುನಾಥ್ ಅವರು ಸ್ಥಳಕ್ಕೆ ತೆರಳಿ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ಅಷ್ಟು ಹೊತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಶೋಭಾರಾಣಿ ವಿ.ಜೆ ಮತ್ತು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರೂ ಆಗಮಿಸಿದರು. ಈ ಕುರಿತ ಚರ್ಚೆ ಎಸ್‌ಪಿ ಕಚೇರಿಗೆ ಸ್ಥಳಾಂತರಗೊಂಡಿತು.
ಕೆಲ ಹೊತ್ತಿನ ಚರ್ಚೆ ಬಳಿಕ ವಿವಾದ ಅಂತ್ಯಗೊಂಡಿತು. ಪಾಲಿಕೆ ಆಯುಕ್ತರ ಗಮಕ್ಕೇ ತಾರದೆ ಬ್ಯಾನರ್ ತೆರವು ಮಾಡಿದ್ದಕ್ಕೆ ಪಾಲಿಕೆಯ ಪರಿಸರ ಅಧಿಕಾರಿ (ಎಇಇ) ಮುನಾಫ್ ಪಟೇಲ್ ಮತ್ತು ಮೇಸ್ತ್ರಿ ಶ್ರೀನಿವಾಸ್ ಅವರ ಅಮಾನತಿಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಶ್ರೀನಿವಾಸ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಮುನಾಫ್ ಪಟೇಲ್ ಅಮಾನತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
‘ನಗರದಲ್ಲಿ ಇತ್ತೀಚೆಗೆ ಹಲವು ಕಾರ್ಯಕ್ರಮಗಳು ನಡೆದವು. ಹುಟ್ಟುಹಬ್ಬಗಳು ಬಂದವು. ಅದಕ್ಕಾಗಿ ನಗರದ ಎಲ್ಲೆಂದರಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಎಲ್ಲವನ್ನು ನಾವು ತೆರವು ಮಾಡುತ್ತಾ ಹೋದೆವು. ಆಗ ವಾಲ್ಮೀಕಿ ಜಯಂತಿಯ ಒಂದೆರಡು ಬ್ಯಾನರ್‌ಗಳನ್ನು ತೆಗೆದೆವು. ವಿವಾದ ಸೃಷ್ಟಿಯಾಯಿತು’ ಎಂದು ಪಾಲಿಕೆ ಸಿಬ್ಬಂದಿ ಹೇಳಿದ್ದಾರೆ.
‘ಉದ್ಧಟತನದ ವಿರುದ್ಧ ಕ್ರಮ’
ಪಾಲಿಕೆ ಅಧಿಕಾರಿಗಳ ಅಮಾನತಿಗೆ ಆಯುಕ್ತ ಮಂಜುನಾಥ್ ಅವರು ಕಾರಣ ನೀಡಿದ್ದಾರೆ. ಅನಧಿಕೃತ ಬ್ಯಾನರ್‌ಗಳ ಅಳವಡಿಕೆಗೆ ಅನುಮತಿ ಇಲ್ಲ ಎಂಬುದೇನೋ ಸರಿ. ಆದರೆ ತೆರವು ಕಾರ್ಯಾಚರಣೆ ಕುರಿತು ಪರಿಸರ ಅಧಿಕಾರಿ ಮುನಾಫ್ ಪಟೇಲ್ ಅವರು ಪಾಲಿಕೆಗೆ ಮಾಹಿತಿ ನೀಡಬೇಕಿತ್ತು. ಏಕಾಏಕಿ ಕಾರ್ಯಾಚರಣೆ ನಡೆಸಿರುವುದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಸಮುದಾಯವೊಂದರ ಭಾವನೆಗಳಿಗೆ ಗಾಸಿಯುಂಟಾಗಿದೆ. ಹೀಗಾಗಿ ಅವರ ಅಮಾನತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಅಳವಡಿಸಿರುವ ಬ್ಯಾನರ್‌ಗಳು ಅಧಿಕೃತವೋ ಅನಧೀಕೃತವೋ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಕೆಲವು ಬ್ಯಾನರ್‌ಗಳಿಗೆ ಅನುಮತಿ ಪಡೆಯಲಾಗಿದೆ. ಇನ್ನು ಕೆಲವು ಬ್ಯಾನರ್‌ಗಳಿಗೆ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.