ತೆಕ್ಕಲಕೋಟೆ ಸಮೀಪದ ವರವಿನ ಮಲ್ಲೇಶ್ವರ ದೇವಸ್ಥಾನ
ತೆಕ್ಕಲಕೋಟೆ: ಇಲ್ಲಿನ ಬೆಟ್ಟಗಳ ಮೇಲೆ ನೆಲೆ ನಿಂತಿರುವ ಇತಿಹಾಸ ಪ್ರಸಿದ್ದ ವರವಿನ ಮಲ್ಲೇಶ್ವರ ಜಾತ್ರಾ ಮಹೋತ್ಸವವು ಮೇ 12ರಂದು ನಡೆಯಲಿದೆ.
ಜಾತ್ರೋತ್ಸವದ ಅಂಗವಾಗಿ ಕಂಕಣ ಕಲ್ಯಾಣೋತ್ಸವ ಸೇರಿದಂತೆ ಪ್ರತಿದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸಂಜೆ ಬಲಿಹರಣ ಕಾರ್ಯಕ್ರಮ ಜರುಗಿದವು. 12ರಂದು ಅರ್ಚಕರು ಹಾಗೂ ಭಕ್ತರಿಂದ ದೇವತಾ ಗಣಕ್ಕೆ ಬೆಳಗಿನ ಉತ್ಸವ (ಬಿಳಿನುಚ್ಚಯ್ಯ) ನೆರವೇರಲಿದೆ. ರಥಾಂಗ ಹೋಮದ ಬಳಿಕ ಸಂಜೆ ರಥೋತ್ಸವ ಜರುಗುವುದು.
13ರಿಂದ 16ವರೆಗೆ ಕಡುಬಿನ ಕಾಳಗ, ಗಂಗೆ ಪೂಜೆ ಹಾಗೂ ಕಂಕಣ ಬಿಚ್ಚುವ ಕಾರ್ಯಗಳು ನಡೆಯಲಿವೆ.
ನವ ವಿವಾಹಿತರ ಜಾತ್ರೆ : ಸಿರುಗುಪ್ಪ ತಾಲ್ಲೂಕಿನಾದ್ಯಂತ ನಡೆಯುವ ಜಾತ್ರೆಗಳಿಗೆ ಬಲಕುಂದಿಯ ಬನ್ನಿ ಮಹಾಕಾಳಿ ಜಾತ್ರೆಯು ಬುನಾದಿ ಹಾಕಿದರೆ, ವರವಿನ ಮಲ್ಲೇಶ್ವರ ಜಾತ್ರೆಯು ಮುಕ್ತಾಯ ಸೂಚಿಸುತ್ತದೆ. ನವ ವಿವಾಹಿತರು ಜಾತ್ರೆಯಲ್ಲಿ ಸೇರುವುದು ವಾಡಿಕೆ.
ಯುಗಾದಿ ನಂತರದ ಅಗಿ ಹುಣ್ಣಿಮೆಯಂದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಐತಿಹಾಸಿಕ ಹಿನ್ನೆಲೆ
ಹೊಳಗುಂದಿ ಬೇಟೆಗಾರರು ಮೊಲ ಬೇಟಿಯಾಡಲು ಯತ್ನಿಸಿದಾಗ ಅದು ಮಲ್ಲಯ್ಯನ ಬೆನ್ನ ಹಿಂದೆ ಅವಿತುಕೊಳ್ಳುತ್ತದೆ. ಬೇಟೆಗಾರರನ್ನು ತಡೆದ ಮಲ್ಲಯ್ಯ ಮೊಲದ ಜೀವಹರಣದ ಬದಲಾಗಿ ತನ್ನ ರಥೋತ್ಸವಂದು ಪಾದರಕ್ಷೆ ಹಾಕಿಕೊಂಡೇ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುತ್ತಾನೆ. ದೇವಸ್ಥಾನಕ್ಕೆ ಪಾದರಕ್ಷೆ ಧರಿಸಿ ಬರುವ ಹೊಳಗುಂದಿ ಬೇಡರು ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಆಕರ್ಷಕ ಶಿಲ್ಪಕಲೆ: ವರವಿನ ಮಲ್ಲೇಶ್ವರ ದೇವಾಲಯವು ಕಲ್ಯಾಣದ ಚಾಲುಕ್ಯರು ಹಾಗೂ ವಿಜಯನಗರದ ವಾಸ್ತುಶೈಲಿಯ ಸಮ್ಮಿಶ್ರಣವಾಗಿದೆ. 10ನೇ ಶತಮಾನದಲ್ಲಿ ನಿರ್ಮಿಸಿದ ರಾಜಗೋಪುರ ಗಾಳಿಗೋಪುರ ಸೇರಿದಂತೆ ನಾಲ್ಕು ಗೋಪುರ ಇವೆ. ಶಿವ ಹಾಗೂ ಪಾರ್ವತಿಯರ ಉಬ್ಬು ಶಿಲ್ಪಗಳು ಕಂಡು ಬರುತ್ತವೆ. ದೇವಾಲಯದ ಮಹಾಮಂಟಪದಲ್ಲಿ ‘ಉಳಿಮುಟ್ಟದ ಲಿಂಗ’ ಅರ್ಥಾತ್ ‘ಉದ್ಭವಲಿಂಗ’ ಆಕರ್ಷಿಸುತ್ತಿದೆ. ಶಾಸನಗಳಲ್ಲಿ ‘ಹರವಿನ ದೇವರು’ ‘ಅರಿಮಲ್ಲಪ್ಪನ ತೇರು’ ಎಂದೂ ಉಲ್ಲೇಖವಿದೆ.
ಭಕ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೀದಿ ದೀಪ ವ್ಯವಸ್ಥೆ ರಥಬೀದಿಗೆ ಸಿಮೆಂಟ್ ಆರೋಗ್ಯ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗಿದೆನರಸಪ್ಪ ಸಿರುಗುಪ್ಪ, ಪ್ರಭಾರ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.