ಬಳ್ಳಾರಿ: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಜಾತಿ, ಉಪಜಾತಿಗಳ ಜನರೂ ಧರ್ಮದ ಕಾಲಂನಲ್ಲಿ ಹಿಂದು ಎಂದೂ, ಜಾತಿ ಕಾಲಂನಲ್ಲಿ ‘ವೀರಶೈವ–ಲಿಂಗಾಯತ’ ಎಂದು ಬರೆಸಬೇಕಾಗಿ ‘ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್’ ಅಧ್ಯಕ್ಷ ಮಹೇಶ್ವರ ಸ್ವಾಮಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ನಡೆದ ಪಂಚಪೀಠಗಳ ಜಗದ್ಗುರುಗಳ ಸಭೆ, ಹುಬ್ಬಳ್ಳಿಯಲ್ಲಿ ನಡೆದ ವೀರಶೈವ–ಲಿಂಗಾಯತ ಗುರುವಿರಕ್ತರ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ಉಪ ಜಾತಿ ಕಾಲಂನಲ್ಲಿ ಸಂಬಂಧಿಸಿದ ಉಪ ಜಾತಿಗಳ ಹೆಸರನ್ನು ನಮೂದಿಸಬಹುದು’ ಎಂದೂ ಅವರು ತಿಳಿಸಿದರು.
ವೀರಶೈವ–ಲಿಂಗಾಯತ ಎರಡೂ ಬೇರೆ ಎಂಬ ಅಭಿಪ್ರಾಯ ಕೇಳಿಬಂದಿವೆ. ಆದರೆ, ಈಗ ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಸಬೇಕು. 2026ರಲ್ಲಿ ಕೇಂದ್ರ ಸರ್ಕಾರವು ಜನಗಣತಿ–ಜಾತಿ ಗಣತಿ ನಡೆಸುತ್ತಿದೆ. ಅದು ಆರಂಭವಾಗುವುದಕ್ಕೂ ಮುನ್ನ ಇಡೀ ವೀರಶೈವ– ಲಿಂಗಾಯತರು ಒಟ್ಟಾಗಿ ಕೇಂದ್ರಕ್ಕೆ ನಿಯೋಗ ಹೋಗಿ ಅಲ್ಲಿ ಧರ್ಮ ಕಾಲಂನಲ್ಲಿ ವೀರಶೈವ–ಲಿಂಗಾಯತ ಎಂದು ಬರೆಸಲು ಅವಕಾಶ ಕೋರುವುದಾಗಿ’ ತಿಳಿಸಿದರು.
ರೈತ ಮುಖಂಡ ಪುರುಷೋತ್ತಮ ಗೌಡ ಮಾತನಾಡಿ, ‘ವೀರಶೈವ, ಲಿಂಗಾಯತ ಎಂದು ಪ್ರತ್ಯೇಕವಾಗಿ ಬರೆಯುವುದರಿಂದ ಸಮುದಾಯ ವಿಘಟನೆಗೊಳ್ಳಲಿದೆ. ಆದ್ದರಿಂದ ಜಾತಿ ಕಾಲಂನಲ್ಲಿ ವೀರಶೈವ–ಲಿಂಗಾಯತ ಎಂದು ಬರೆಸಿ ಒಗ್ಗಟ್ಟಾಗಬೇಕು’ ಎಂದು ಮನವಿ ಮಾಡಿದರು.
ಪಲ್ಲೇದ ಪಂಪಾಪತಿ, ಗೋನಾಳ್ ರಾಜಶೇಖರ ಗೌಡ, ಪ್ರಭಯ್ಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.