ಬಳ್ಳಾರಿ: ‘ಮಾಜಿ ಸಚಿವ ಎಚ್. ಆಂಜನೇಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಲೆಮಾರಿ ಸಮುದಾಯದ ಸಭೆಗೆ ಏಕಾಏಕಿ ನುಗ್ಗಿ ಗಲಾಟೆ ಮಾಡಿದ್ದೂ ಅಲ್ಲದೇ, ಅಲೆಮಾರಿ ಸಮುದಾಯದ ನಾಯಕರ ಮೇಲೆ ಪ್ರಕರಣ ದಾಖಲಿಸಿರುವ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರನ್ನು ವಜಾಗೊಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ವೆಂಕಟೇಶ ಹೆಗಡೆ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಮಾಜಿ ಸಚಿವ ಎಚ್. ಆಂಜನೇಯ ಅಲೆಮಾರಿಗಳ ಸ್ಥಾನಮನಕ್ಕಾಗಿ ಹೋರಾಟ ಮಾಡಿಕೊಂಡೆ ಬಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ 49 ಅಲೆಮಾರಿ ಜಾತಿಗಳ ಮುಖಂಡರ ಸಭೆ ನಡೆಸುವಾಗ, ಕೊರಚ, ಕೊರವ ಸಮಾಜದವರಾದ ಜಿ.ಪಲ್ಲವಿ ಅವರು ಏಕಾಏಕಿ ಸಭೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅಲೆಮಾರಿ ಸಮುದಾಯದ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ಅಲೆಮಾರಿಗಳ ಅಭಿವೃದ್ಧಿಗೆ ಆದ ಹಿನ್ನಡೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದು ವೇಳೆ ಅವರಿಗೆ ತಮ್ಮದೇ ಸಮಾಜದ ಬಗ್ಗೆ ಮಾತ್ರ ಕಾಳಜಿ ಇದ್ದರೆ ಅದಕ್ಕಾಗಿ ಪ್ರತ್ಯೇಕ ನಿಗಮ ರಚಿಸಲು ಹೋರಾಡಲಿ. ಅದು ಬಿಟ್ಟು ಅಲೆಮಾರಿ ಸಂಘದ ಅಧ್ಯಕ್ಷ ಶಿವಕುಮಾರ್, ಕಾಂಗ್ರೆಸ್ ನಾಯಕರೂ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿರುವುದು ನ್ಯಾಯವಲ್ಲ’ ಎಂದಿದ್ದಾರೆ.
‘ಅಲೆಮಾರಿಗಳೂ ಸೇರಿದಂತೆ ಹಿಂದುಳಿದ ಸಮುದಾಯಗಳಿಗಾಗಿ ಆಂಜನೇಯ ಹೋರಾಡುತ್ತಿದ್ದಾರೆ. ಮೇಲಾಗಿ ಅವರು ಮಾಜಿ ಸಚಿವರು. ಅವರಿದ್ದ ಸಭೆಯಲ್ಲಿ ಈ ರೀತಿ ಗೊಂದಲ ಸೃಷ್ಟಿ ಮಾಡುವ ಕಾರ್ಯ ಮಾಡಿದ್ದು ಸರಿ ಅಲ್ಲ. ಪಲ್ಲವಿ ಅವರನ್ನು ಈ ಕೂಡಲೇ ನಿಗಮದ ಅಧ್ಯಕ್ಷ ಪದವಿಯಿಂದ ವಜಾಗೊಳಿಸಬೇಕು. ಆ ಸ್ಥಾನಕ್ಕೆ ನಿಜವಾದ ಅಲೆಮಾರಿ ನಾಯಕರನ್ನು ನೇಮಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.