ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಿಂದ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಟ್ರಸ್ಟ್‌ಗೆ ಸಂಗ್ರಹವಾಗುವ ಹಣದಲ್ಲಿ ವಿಜಯನಗರ ಜಿಲ್ಲೆಗೆ ಪಾಲು ಒದಗಿಸುವುದಕ್ಕೆ ಜನಸಂಗ್ರಾಮ ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಕೇಂದ್ರ ಗಣಿ ಇಲಾಖೆ ಸಚಿವರು, ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
2024ರ ಜನವರಿಯಲ್ಲಿ ಪರಿಷ್ಕರಿಸಿ ಹೊರಡಿಸಲಾಗಿರುವ ಡಿಎಂಎಫ್ ನಿಯಮಾವಳಿ –2016ರ ಪ್ರಕಾರ ಹಣವನ್ನು ಮತ್ತೊಂದು ಜಿಲ್ಲೆಗೆ ವರ್ಗಾಯಿಸಲು ಅವಕಾಶವಿಲ್ಲ ಎಂದು ಜನಸಂಗ್ರಾಮ ಪರಿಷತ್ ಪ್ರತಿಪಾದಿಸಿದೆ.
‘ಕೇಂದ್ರ ಗಣಿ ಸಚಿವಾಲಯ ಕೂಡಲೇ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಬಳ್ಳಾರಿಯ ಡಿಎಂಎಫ್‌ನಿಂದ ಹಣ ವರ್ಗಾವಣೆಯಾಗುವುದನ್ನು ತಡೆಯಬೇಕು, ಡಿಎಂಎಫ್ ನಿಯಮಾವಳಿಗಳನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ಡಿಎಂಎಫ್ ನಿಧಿ ಬಳಸಿ ಜಾರಿಗೆ ತರಲಾಗುವ ‘ಪ್ರಧಾನ ಮಂತ್ರಿ ಖನಿಜ ವಲಯ ಕಲ್ಯಾಣ ಯೋಜನೆ( ಪಿಎಂಕೆಕೆಕೆವೈ)’ಯ ಮೂಲತತ್ವಗಳನ್ನು ರಕ್ಷಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿರುವ ಪತ್ರದಲ್ಲಿ ಜನಸಂಗ್ರಾಮ ಪರಿಷತ್ ಉಲ್ಲೇಖಿಸಿದೆ.
ಪ್ರತಿವರ್ಷ ಪಾಲು: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದ ಬಳಿಕ ವಿಜಯನಗರ ಜಿಲ್ಲೆಗೆ ಮೂಲಸೌಲಭ್ಯ ಒದಗಿಸುವ ಕುರಿತು 2021 ಸೆ. 6ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಅಂದು ಸಚಿವರಾಗಿದ್ದ ಆನಂದ್ ಸಿಂಗ್, ಬಳ್ಳಾರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆ ಸಭೆಯಲ್ಲಿ ಇದ್ದರು.
‘ಬಳ್ಳಾರಿ ಜಿಲ್ಲೆಯ ಒಟ್ಟು ಗಣಿ ಬಾಧಿತ ಪ್ರದೇಶ 2,33,500 ಹೆಕ್ಟೇರ್. ಅದರಲ್ಲಿ 76,004 ಹೆಕ್ಟೇರ್ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಗಣಿ ಬಾಧಿತ ಪ್ರದೇಶವು ಶೇ 33 ರಷ್ಟಿರುವ ಕಾರಣ ಜಿಲ್ಲಾ ಖನಿಜ ಪ್ರತಿಷ್ಠಾನ ನಿಯಮ 12(7) ದಂತೆ ಪ್ರತಿ ವರ್ಷ ಶೇ 33 ರಷ್ಟು ಹಣವನ್ನು ವರ್ಗಾವಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅನುಮೋದನೆಯನ್ನೂ ಪಡೆಯಲಾಯಿತು’ ಎಂದು ಅಂದಿನ ಸಭಾ ನಡಾವಳಿಗಳಲ್ಲಿ ಉಲ್ಲೇಖಿಸಲಾಗಿದೆ.
2022ರ ಮಾರ್ಚ್‌ನಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರವಾಗುವ ಡಿಎಂಎಫ್‌ನ ಶೇ 28ನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು ಎಂದಿತ್ತು. ಅದರಂತೆ ಒಟ್ಟು ಸಂಗ್ರಹದ ಶೇ 28ರಷ್ಟು ಲೆಕ್ಕ ಹಾಕಿ 2021ರಿಂದ 2024ರ ನಡುವಿನ ಅವಧಿಯಲ್ಲಿ, ಹಲವು ಹಂತಗಳಲ್ಲಿ ಒಟ್ಟು ₹485.54 ಕೋಟಿಯನ್ನು ವಿಜಯನಗರ ಜಿಲ್ಲೆಗೆ ನೀಡಲಾಗಿದೆ.
ಬಳಿಕ ಸಂಡೂರು ತಾಲೂಕಿನಲ್ಲಿ ಸಂಗ್ರವಾಗುವ ಡಿಎಂಎಫ್ ನಿಧಿಯ ಒಟ್ಟಾರೆ ಹಣದ ಶೇ. 28 ಅನ್ನು ನೀಡಬೇಕು ಎಂದು ಬಳ್ಳಾರಿ ಜಿಲ್ಲೆಗೆ ನಿರ್ದೇಶನ ನೀಡಲಾಯಿತು. ಅದರಂತೆ 2024ರ ಜುಲೈ 23ರಂದು (ಚೆಕ್ ಸಂಖ್ಯೆ–535039) ₹210.36 ಕೋಟಿಯನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಈ ವರ್ಷದ ಪಾಲಿಗೆ ಪತ್ರ: ಸದ್ಯ 2024–25ನೇ ಸಾಲಿನ ಪಾಲು ನೀಡುವಂತೆ ವಿಜಯನಗರ ಜಿಲ್ಲೆಯಿಂದ ಪ್ರಸ್ತಾವನೆ ಬಂದಿದ್ದು, ಇದಕ್ಕೆ ಹೊಸ ಮಾರ್ಗಸೂಚಿಗಳು ಅಡ್ಡಿಯಾಗಿವೆ. ಈ ಹಂತದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ, ಅಲ್ಲಿಂದ ಜಿಲ್ಲಾಧಿಕಾರಿಗಳಿಗೆ ಈ ವರೆಗೆ ನಿರ್ದೇಶನ ಸಿಕ್ಕಿಲ್ಲ.
ಡಿಎಂಎಫ್‌ನ ಹೊಸ ಮಾರ್ಗಸೂಚಿಗಳ ಪ್ರಕಾರ ಹಣವನ್ನು ಇನ್ನೊಂದು ಜಿಲ್ಲೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಈ ಜಿಲ್ಲೆಯ ಗಣಿಗಳಿಂದ 10–15 ಕಿ.ಮೀ ವ್ಯಾಪ್ತಿಯ ನೆರೆಯ ಜಿಲ್ಲೆಗಳ ಪ್ರದೇಶಗಳು ಬಾಧಿತವಾಗಿದ್ದರೆ ಅಲ್ಲಿನ ಕಾಮಗಾರಿಗಳಿಗೆ ಅನುದಾನ ಒದಗಿಸಲು ಅವಕಾಶವಿದೆ.
ಈ ಮಧ್ಯೆ, ಒಂದು ಜಿಲ್ಲೆಯಲ್ಲಿ ಸಂಗ್ರಹವಾಗುವ ಹಣದಲ್ಲಿ ಇನ್ನೊಂದು ಜಿಲ್ಲೆಗೆ ಪಾಲು ಕೊಡುವುದನ್ನು ಆಕ್ಷೇಪಿಸಿರುವ ಜನಸಂಗ್ರಾಮ ಪರಿಷತ್ ಈ ನಿಟ್ಟಿನಲ್ಲಿ ಹೋರಾಟ ಕೈಗೊಂಡಿದೆ.
ಮತ್ತೊಂದು ಕಡೆ, ಖನಿಜ ಸಂಪದ್ಭರಿತ ಜಿಲ್ಲೆಯಲ್ಲಿ ಸಂಗ್ರಹವಾಗು ನಿಧಿಯಿಂದ ಅಂತ್ಯವೇ ಇಲ್ಲ ಎಂಬಂತೆ ಪ್ರತಿವರ್ಷ ಪಾಲು ನೀಡುವ ಬಗ್ಗೆ ಜನರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
2024ರಲ್ಲಿ ಪ್ರಕಟವಾದ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಹಣವನ್ನು ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ನಿರ್ದೇಶನ ಕೇಳಲಾಗಿದೆ. ಉತ್ತರ ಇನ್ನೂ ಬಂದಿಲ್ಲ.– ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.