ADVERTISEMENT

ಅದಿರು ಸಂಸ್ಕರಣಾ ಘಟಕ: ಯಶವಂತನಗರ, ಸೋಮಲಾಪುರ ಗ್ರಾಮಸ್ಥರ ವಿರೋಧ

ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 5:29 IST
Last Updated 9 ಜುಲೈ 2022, 5:29 IST
ಸಂಡೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು
ಸಂಡೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು   

ಸಂಡೂರು: ತಾಲ್ಲೂಕಿನ ಸೋಮಲಾಪುರದಲ್ಲಿ ಎಂ.ಎಸ್.ಪಿ.ಎಲ್ ಲಿಮಿಟೆಡ್ ಕಂಪನಿ ವತಿಯಿಂದ 26.44 ಹೆಕ್ಟೇರ್ ಪ್ರದೇಶದಲ್ಲಿ 5 ಎಂ.ಟಿ.ಪಿ.ಎ ಸಾಮರ್ಥ್ಯದ ಕಬ್ಬಿಣದ ಅದಿರು ಸಂಸ್ಕರಣಾ ಘಟಕ (ಐರನ್ ಓರ್ ಪ್ರೊಸೆಸ್ಸಿಂಗ್ ಪ್ಲಾಂಟ್) ಹಾಗೂ 3 ಎಂ.ಟಿ.ಪಿ.ಎ ಸಾಮರ್ಥ್ಯದ ಪೆಲ್ಲೆಟ್ ಪ್ಲಾಂಟ್ (ಕಬ್ಬಿಣದ ಚಿಕ್ಕ ಉಂಡೆ) ಸ್ಥಾಪನೆ ಮತ್ತು 16.55 ಹೆಕ್ಟೇರ್ ಪ್ರದೇಶದಲ್ಲಿ ಅದಿರು ಸಾಗಣೆ ಪೈಪ್‌ಲೈನ್‌ (ಇಂಟಿಗ್ರೇಟೆಡ್ ಡೌನ್ ಹಿಲ್ ಪೈಪ್ ಕನ್ವೆಯರ್) ಅಳವಡಿಸುವ ಕುರಿತಂತೆ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸೋಮಲಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.

ಉದ್ದೇಶಿತ ಘಟಕಗಳ ಸ್ಥಾಪನೆಯನ್ನು ವಿರೋಧಿಸಿ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಂಜಿನಪ್ಪ, ಮುಖಂಡರಾದ ಕಾಶಪ್ಪ, ನಾಗರಾಜ, ಲಿಂಗರಾಜ, ರಾಮ, ತಿಪ್ಪೇಸ್ವಾಮಿ,ಬಸವರಾಜ, ರಂಗಸ್ವಾಮಿ, ಶಾಂಭಣ್ಣ, ಚಿತ್ರಿಕಿ ತೋಟಪ್ಪ, ಶ್ರೀಶೈಲ, ಟಿ.ಎಂ. ಶಿವಕುಮಾರ್, ಸೋಮಲಾಪುರ ಹಾಗೂ ಯಶವಂತನಗರ ಗ್ರಾಮಗಳು ಉದ್ದೇಶಿತ ಘಟಕಗಳಿಂದ ಕೇವಲ 200 ಮೀ. ಅಂತರದಲ್ಲಿವೆ. ಘಟಕ ಸ್ಥಾಪನೆಯಿಂದ ಈ ಗ್ರಾಮಗಳ ಜನತೆಗೆ ತೊಂದರೆಯಾಗುತ್ತದೆ. ಇದರಿಂದ 100 ಮೀ. ಅಂತರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಎಂದುಆತಂಕವ್ಯಕ್ತಪಡಿಸಿದರು.

ಈ ಭಾಗದಲ್ಲಿ ಅಂತರ್ಜಲದ ಸಮಸ್ಯೆಯಾಗಲಿದೆ. ಸಮೀಪದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವಿದ್ದು, ಘಟಕ ಸ್ಥಾಪನೆಯಾದರೆ, ಪರಿಸರಕ್ಕೆ ಹಾಗೂ ವನ್ಯ ಜೀವಿಗಳಿಗೂ ತೊಂದರೆಯಾಗಲಿದೆ. ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಅಧಿಕಾರಿಗಳು ಕಂಪನಿಯವರಿಗೆ ಉದ್ದಿಮೆ ಆರಂಭಕ್ಕೆ ಪರಸರ ವಿಮೋಚನಾ ಪರವಾನಗಿಯನ್ನು ನೀಡಬಾರದು ಎಂದು ಒತ್ತಾಯಿಸಿದರು.

ADVERTISEMENT

ಉದ್ದಿಮೆ ಪರವಾಗಿ ಮಾತನಾಡಿದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ರಾಜು, ಸತೀಶ್, ಆನಂದ್, ಬಿ.ಎಂ. ಉಜ್ಜಿನಯ್ಯ, ಉದ್ದಿಮೆ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕಂಪನಿಯವರು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಸುತ್ತಲಿನ ಜನತೆಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಉದ್ದಿಮೆ ನಡೆಸಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೆಣೈ, ಡಿವೈಎಸ್‍ಪಿ ಕಾಶಿನಾಥ್ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಯಶವಂತನಗರ, ಸೋಮಲಾಪುರ, ಅಂಕಮನಾಳ್, ಕಾಳಿಂಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.