ADVERTISEMENT

ವಿವೇಚನೆಯಿಂದ ಮತ ಹಾಕಿ ಯೋಗ್ಯರ ಆರಿಸಿ: ಪ್ರೊ. ರಾಜ್ಮಾ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 12:37 IST
Last Updated 12 ಮಾರ್ಚ್ 2019, 12:37 IST
ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಕಿಚಿಡಿ ಚನ್ನಪ್ಪ ಮಾತನಾಡಿದರು
ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಕಿಚಿಡಿ ಚನ್ನಪ್ಪ ಮಾತನಾಡಿದರು   

ಹೊಸಪೇಟೆ: ‘ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆ ರಾಷ್ಟ್ರೀಯ ಹಬ್ಬವಾಗಬೇಕು. ಅದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ವಿವೇಚನೆಯಿಂದ ಮತ ಹಾಕಿ ಯೋಗ್ಯರನ್ನು ಆರಿಸಿ ಕಳುಹಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರವಾಗಿರಲು ಸಾಧ್ಯ’ ಎಂದು ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜ್ಮಾ ತಿಳಿಸಿದರು.

ಇಲ್ಲಿನ ಥಿಯೊಸಫಿಕಲ್‌ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ‘ಪ್ರಜಾಪ್ರಭುತ್ವ ಮತ್ತು ಚುನಾವಣೆ ಸುಧಾರಣೆಗಳ’ ಕುರಿತು ಮಾತನಾಡಿದರು.

‘ರಾಜಕೀಯ ವ್ಯವಸ್ಥೆ ಬದಲಾಗಬೇಕಾದರೆ ಪ್ರತಿಯೊಬ್ಬ ಮತದಾರರ ಆಲೋಚನಾ ಶಕ್ತಿ ಬದಲಾಗಬೇಕು. ವಿವೇಚನೆ ಬಳಸಿ ಹಕ್ಕು ಚಲಾಯಿಸಿದರೆ ಯೋಗ್ಯ ನಾಯಕತ್ವ ಸಿಗಲು ಸಾಧ್ಯ. ಹೀಗಾಗಿ ನಾವು ಹಾಕುವ ಪ್ರತಿಯೊಂದು ಮತ ಕೂಡ ಯೋಗ್ಯರಿಗೆ ಹೋಗಬೇಕು’ ಎಂದು ತಿಳಿಸಿದರು.

ADVERTISEMENT

‘ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣವು ಜನಸಾಮಾನ್ಯರ ಅಧಿಕಾರವಾಗಿ ಉಳಿದಿಲ್ಲ. ಅದು ಉಳ್ಳವರಿಗೆ ಸೀಮಿತವಾಗಿದೆ. ಅದು ಬದಲಾಗಬೇಕು ಎಂದರೆ ಎರಡು ಸಲ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ಕುಟುಂಬ ರಾಜಕಾರಣಕ್ಕೆ ತೆರೆ ಬೀಳಬೇಕಾದರೆ ರಕ್ತಸಂಬಂಧ ಅಥವಾ ವೈವಾಹಿಕ ಸಂಬಂಧದಲ್ಲಿ ಒಬ್ಬರಿಗಿಂತ ಹೆಚ್ಚಿನವರಿಗೆ ಸ್ಪರ್ಧಿಸುವ ಹಕ್ಕು ಕೊಡಬಾರದು.ಆಗ ಅಧಿಕಾರ ವಿಕೇಂದ್ರೀಕರಣ ಮತ್ತು ಜನರ ಸಹಭಾಗಿತ್ವಕ್ಕೆ ಹೆಚ್ಚು ಅರ್ಥ ಬರುತ್ತದೆ’ ಎಂದರು.

ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಕಿಚಿಡಿ ಚನ್ನಪ್ಪ,‘ರಾಜಕಾರಣದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಪ್ರಾತಿನಿಧ್ಯ ಸಿಗಬೇಕು. ಅದಕ್ಕಾಗಿ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು’ ಎಂದು ಹೇಳಿದರು.

ಪ್ರಾಧ್ಯಾಪಕಓಂಕಾರೇಶ್ವರ, ವಿದ್ಯಾರ್ಥಿಗಳಾದ ಎಂ.ಆರ್‌. ಕಲಾವತಿ, ಕೆ. ಮೀನಾಕ್ಷಿ, ಪವಿತ್ರ, ಕಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.