ADVERTISEMENT

ಕಲುಷಿತ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣ

ಹೊಸಪೇಟೆಯ 9 ಹಾಗೂ 26ನೇ ವಾರ್ಡ್‌ನಲ್ಲಿ ಹಲವು ಅಸ್ವಸ್ಥ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಜನವರಿ 2023, 19:30 IST
Last Updated 19 ಜನವರಿ 2023, 19:30 IST

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಲುಷಿತ ನೀರಿನ ಸಮಸ್ಯೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ.

ರಾಣಿಪೇಟೆ ಬಳಿಕ ಈಗ ನಗರದ ಇನ್ನೂ ಕೆಲವು ವಾರ್ಡ್‌ಗಳಲ್ಲೂ ಕಲುಷಿತ ನೀರಿನ ಸಮಸ್ಯೆ ವಿಸ್ತರಿಸಿದೆ. ಕಲುಷಿತ ನೀರು ಸೇವಿಸಿ ನಗರದ ರಾಣಿಪೇಟೆಯಲ್ಲಿ ಲಕ್ಷ್ಮಿದೇವಿ ಎಂಬುವರು ಜ.11ರಂದು ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಇನ್ನೇನು ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಮತ್ತಷ್ಟು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ 9ನೇ ವಾರ್ಡ್‌ ಹಾಗೂ 26ನೇ ವಾರ್ಡ್‌ಗಳಲ್ಲಿ ಸಮಸ್ಯೆ ಉದ್ಭವಿಸಿದೆ. ಒಂಬತ್ತನೇ ವಾರ್ಡ್‌ ವ್ಯಾಪ್ತಿಗೆ ಬರುವ ನಗರದ ಸಿದ್ಧಲಿಂಗಪ್ಪ ಚೌಕಿಯ ಎರಡನೇ ಅಡ್ಡರಸ್ತೆಯ ಮೂವರು ನಿವಾಸಿಗಳು ಮಂಗಳವಾರ ಅಸ್ವಸ್ಥರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಮ (7), ಮೆಹರಾಜ್‌ (2) ಹಾಗೂ ಮುಶಕರ್‌ (34) ಆಸ್ಪತ್ರೆಗೆ ದಾಖಲಾದವರು.

ADVERTISEMENT

ಇನ್ನು, ನಗರದ 26ನೇ ವಾರ್ಡ್‌ನಲ್ಲಿ ಸ್ವತಃ ನಗರಸಭೆ ಸದಸ್ಯ ಗೌಸ್‌ ಅವರು ಅಸ್ವಸ್ಥರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಒಂದು ವರ್ಷದ ಮಗು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದೆ. 20ಕ್ಕೂ ಹೆಚ್ಚು ಜನರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. 9ನೇ ವಾರ್ಡ್‌ನ ನಗರಸಭೆ ಸದಸ್ಯೆ ಎಚ್‌. ಮುನ್ನಿ ಹಾಗೂ ಗೌಸ್‌ ಅವರು ಬುಧವಾರ ನಗರದಲ್ಲಿ ನಡೆದ ನಗರಸಭೆ ವಿಶೇಷ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದರು. ಎಲ್ಲೆಲ್ಲಿ ಸಮಸ್ಯೆ ಕಂಡು ಬಂದಿದೆಯೋ ಅಲ್ಲೆಲ್ಲಾ ನಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಿ, ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ಆದರೆ, ಅದು ಸಾಲುತ್ತಿಲ್ಲ. ಜನ ನೀರಿಗಾಗಿ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಕಲುಷಿತ ನೀರಿನ ಸಮಸ್ಯೆ ನಮ್ಮ ವಾರ್ಡ್‌ಗೂ ಬಂದಿದೆ. ವಾಂತಿ, ಭೇದಿಗೆ ಜನ ಅಸ್ವಸ್ಥರಾಗುತ್ತಿದ್ದಾರೆ. ಅಧಿಕಾರಿಗಳಿಗೆ ಹಲವು ಸಲ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಿಲ್ಲ. ಅವರ ತಪ್ಪಿನಿಂದ ನಾವು ಜನರಿಂದ ಬೈಸಿಕೊಳ್ಳಬೇಕಾಗಿದೆ. ಶುದ್ಧ ಕುಡಿಯಲು ನೀರು ಕೊಡಲಾಗದವರು ಸದಸ್ಯರಾಗಿ ಏಕಿರಬೇಕು ಎಂದು ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಒಬ್ಬ ಮಹಿಳೆ ಸಾವನ್ನಪ್ಪಿದರೂ ಪಾಠ ಕಲಿತಿಲ್ಲ’ ಎಂದು ಸದಸ್ಯರಾದ ಮುನ್ನಿ, ಗೌಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.