ADVERTISEMENT

‘ಹೊಸ ಮಜಲಿನತ್ತ ಯಕ್ಷಗಾನ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 9:57 IST
Last Updated 29 ಆಗಸ್ಟ್ 2019, 9:57 IST
ಕಾರ್ಯಕ್ರಮದಲ್ಲಿ ‌‌ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ಮಾತನಾಡಿದರು
ಕಾರ್ಯಕ್ರಮದಲ್ಲಿ ‌‌ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ಮಾತನಾಡಿದರು   

ಹೊಸಪೇಟೆ: ‘ಈ ಹಿಂದೆ ಯಕ್ಷಗಾನ ಒಂದು ನಿರ್ದಿಷ್ಟವಾದ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಈಗ ಅದು ಬದಲಾಗಿದೆ. ಇಂದು ಯಕ್ಷಗಾನ ಕ್ಷೇತ್ರಕ್ಕೆ ಪ್ರಜ್ಞಾವಂತ ಯುವ ಸಮುದಾಯ ಪ್ರವೇಶ ಪಡೆದು, ಹೊಸ ಮಜಲಿನತ್ತ ಹೆಜ್ಜೆ ಹಾಕುತ್ತಿದೆ’ ಎಂದು ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ಹೇಳಿದರು.

ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಕಲಾಭಿಮಾನಿ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಮಾತಿನ ಕಲೆ; ತಾಳಮದ್ದಳೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಸಮುದಾಯಗಳಿಗೆ ತಲುಪಿಸಲು ಯಕ್ಷಗಾನ ಪ್ರಭಾವಿ ಮಾಧ್ಯಮವಾಗಿದೆ. ಯಕ್ಷಗಾನ ಕಲಾವಿದರಿಗೆ ಪುರಾಣ ಮತ್ತು ವರ್ತಮಾನದ ಅರಿವು ಇದ್ದು ಸಂದರ್ಭಕ್ಕೆ ಅನುಗುಣವಾಗಿ ಭಾಷೆಯನ್ನು ಪಳಗಿಸುವ ವಿವೇಕ ಇರಬೇಕು’ ಎಂದು ತಿಳಿಸಿದರು.

ADVERTISEMENT

ಕನ್ನಡ ವಿಶ್ವವಿದ್ಯಾಲಯದ ಪ್ರಾ‌ಧ್ಯಾಪಕ ಮೋಹನ ಕುಂಟಾರ್ ಮಾತನಾಡಿ, ‘ಕರಾವಳಿ ಪ್ರದೇಶದ ಕಲೆ ಎಂದೇ ಭಾವಿಸಿಕೊಂಡಿರುವ ಯಕ್ಷಗಾನ ಪರಂಪರೆಗೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಬಳ್ಳಾರಿ ಸಮೀಪದ ಸೋಮಸಮುದ್ರದ ದೇವಸ್ಥಾನದಲ್ಲಿ ದೊರೆತಿರುವ ಶಾಸನವೊಂದರಲ್ಲಿ ತಾಳಮದ್ದಳೆ ಪದವು ಪ್ರಸ್ತಾಪಗೊಂಡಿರುವುದು ಅದಕ್ಕೆ ಸಾಕ್ಷಿ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ ಜಿ ಕನಕೇಶಮೂರ್ತಿ ಮಾತನಾಡಿ, ‘ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಾಂಗತ್ಯ ನಮ್ಮಲ್ಲಿ ಸೃಜನಶೀಲತೆ ಗುಣವನ್ನು ಬೆಳೆಸುತ್ತದೆ’ ಎಂದರು.

ಕಾಲೇಜಿನ ಪ್ರಾಧ್ಯಾಪಕರಾದ ಕೆ. ವೆಂಕಟೇಶ್, ನಾಗಣ್ಣ ಕಿಲಾರಿ, ಡಿ.ಎಂ. ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.