ADVERTISEMENT

ಮನೆ ಮಗ ಮನೆ ಸೇರಿದ...

ಯುವಕರ ಕಾಳಜಿಯಿಂದ ಆಂಧ್ರದ ಯುವಕ ಕುಟುಂಬ ಸೇರಿದ ಕಥೆಯಿದು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಮಾರ್ಚ್ 2019, 14:34 IST
Last Updated 20 ಮಾರ್ಚ್ 2019, 14:34 IST
ನಗರಸಭೆ ಪರಿಸರದಲ್ಲಿ ಭರತ್‌ ಈ ಸ್ಥಿತಿಯಲ್ಲಿ ಸಿಕ್ಕಿದ್ದ
ನಗರಸಭೆ ಪರಿಸರದಲ್ಲಿ ಭರತ್‌ ಈ ಸ್ಥಿತಿಯಲ್ಲಿ ಸಿಕ್ಕಿದ್ದ   

ಹೊಸಪೇಟೆ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು, ಖಿನ್ನತೆಗೆ ಒಳಗಾಗಿ ಹುಚ್ಚನಂತೆ ಅಲೆಯುತ್ತಿದ್ದ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಭವಾನಿಪುರಂ ಗ್ರಾಮದ ಭರತ್‌ (26) ಎಂಬ ಯುವಕನನ್ನು ಸ್ಥಳೀಯ ಯುವಕರು ವಿಶೇಷ ಕಾಳಜಿ ವಹಿಸಿ, ಕುಟುಂಬ ಸೇರುವಂತೆ ಮಾಡಿದ್ದಾರೆ.

ನಗರಸಭೆ ಸದಸ್ಯ ಶ್ರೀಧರ ನಾಯ್ಡು ಹಾಗೂ ಅವರ ಗೆಳೆಯರಾದ ಬಿ.ಎನ್‌. ಮಂಜುನಾಥ,ಜಗನ್ನಾಥ ಸಿಂಗ್‌, ತನ್ವೀರ್‌, ಮಂಜುನಾಥ, ವಕೀಲ ಗೋವಿಂದ ಹಾಗೂ ನಗರಸಭೆಯ ಕೆಲ ಸಿಬ್ಬಂದಿ ವಿಶೇಷ ಆಸ್ಥೆ ವಹಿಸಿದ್ದರಿಂದ ಇದು ಸಾಧ್ಯವಾಗಿದೆ.

ನಡೆದಿದ್ದೇನು?:

ADVERTISEMENT

ಭರತ್‌, ಸಿ.ಎ.ನಲ್ಲಿ ಅನುತ್ತೀರ್ಣಗೊಂಡು ಖಿನ್ನತೆಗೆ ಒಳಗಾಗಿದ್ದರು. ಅದನ್ನು ಅರಿತ ಮನೆಯವರು ಬೆಂಗಳೂರಿನಲ್ಲಿ ಅವರ ಅಕ್ಕ–ಭಾವನ ಮನೆಯಲ್ಲಿ ಇರಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಕೆಲ ದಿನಗಳ ವರೆಗೆ ಕೆಲಸ ನಿರ್ವಹಿಸಿದ ಭರತ್‌, 2018ರ ಮಾರ್ಚ್‌ 19ರಂದು ಮನೆಯವರಿಗೆ ವಿಷಯ ತಿಳಿಸದೆ ನಗರಕ್ಕೆ ಬಂದಿದ್ದಾರೆ.

ದಿನವಿಡೀ ನಗರಸಭೆಯ ಆವರಣದಲ್ಲಿ ಓಡಾಡುತ್ತಿದ್ದ ಭರತ್‌, ರಾತ್ರಿ ಒಂದು ಮಗ್ಗುಲಲ್ಲಿ ಕಾಲ ಕಳೆಯುತ್ತಿದ್ದ. ಒಂದು ವರ್ಷದಿಂದ ಹೀಗೆಯೇ ಮಾಡುತ್ತಿದ್ದ. ಬಿಸಿಲು, ಮಳೆ, ಚಳಿಯಿಂದ ಸೊರಗಿ ಹೋಗಿದ್ದ. ಚರ್ಮ ಕಾಯಿಲೆ ಅಂಟಿಕೊಂಡಿತ್ತು. ಗಡ್ಡ ಬೆಳೆದಿತ್ತು. ನಗರಸಭೆ ಸಿಬ್ಬಂದಿ ಕೊಟ್ಟ ಹಣದಲ್ಲಿ ಅಲ್ಲಿಯೇ ಇದ್ದ ಇಂದಿರಾ ಕ್ಯಾಂಟೀನ್‌ಗೆ ತೆರಳಿ ಉಪಾಹಾರ, ಊಟ ಮಾಡುತ್ತಿದ್ದ. ಇತ್ತೀಚೆಗೆ ಶ್ರೀಧರ ನಾಯ್ಡು ಅವರು ಅದನ್ನು ಗಮನಿಸಿ, ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ. ಯಾವುದೇ ಮಾಹಿತಿ ಸಿಗದಿದ್ದಾಗ ಅವರೇ ಯುವಕನನ್ನು ಕೇಳಿದ್ದಾರೆ. ಆದರೆ, ಯಾವುದಕ್ಕೂ ಯುವಕ ಪ್ರತಿಕ್ರಿಯಿಸಿರಲಿಲ್ಲ. ಎರಡ್ಮೂರು ದಿನ ಹೀಗೆ ಮಾಡಿದರು. ಒಂದು ದಿನ ತನ್ನ ಹೆಸರು, ಪೋಷಕರ ಹೆಸರು ಹಾಗೂ ಊರಿನ ಹೆಸರು ಹೇಳಿದ್ದಾನೆ.

ತನ್ನ ಗೆಳೆಯರೊಂದಿಗೆ ಸಮಾಲೋಚಿಸಿದ ಶ್ರೀಧರ್‌ ಅವರು, ಪೊಲೀಸ್‌ ಅಧಿಕಾರಿಯೊಂದಿಗೆ ಚರ್ಚಿಸಿ ಯುವಕನನ್ನು ಆತನ ಮನೆ ಸೇರಿಸುವ ಸಂಕಲ್ಪ ಮಾಡಿದರು. ಯುವಕನನ್ನು ಜತೆಗೆ ಕರೆದೊಯ್ದು ಕೂದಲು ಕಟಿಂಗ್‌ ಮಾಡಿಸಿದರು. ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ, ಊಟ ಮಾಡಿಸಿದರು. ನಂತರ ಭವಾನಿಪುರಂ ಠಾಣೆಗೆ ಸಂಪರ್ಕಿಸಿದ್ದಾರೆ. ಆದರೆ, ಅಲ್ಲಿ ಯಾವುದೇ ರೀತಿಯ ಕಾಣೆ ಪ್ರಕರಣ ದಾಖಲಾಗಿರಲಿಲ್ಲ.

ನಾಲ್ಕೈದು ದಿನಗಳ ಬಳಿಕ ಭರತ್‌, ತಾಯಿಯ ಮೊಬೈಲ್‌ ಸಂಖ್ಯೆಯನ್ನು ಶ್ರೀಧರ್‌ ಅವರಿಗೆ ತಿಳಿಸಿದ್ದಾನೆ. ಮಂಗಳವಾರ ಶ್ರೀಧರ್ ಅವರು, ಭರತ್‌ ತಾಯಿಯನ್ನು ಸಂಪರ್ಕಿಸಿ, ವಿಷಯ ತಿಳಿಸಿದ್ದಾರೆ. ವಾಟ್ಸ್‌ ಆ್ಯಪ್‌ನಲ್ಲಿ ಮಗನ ಚಿತ್ರಗಳನ್ನು ಕಳುಹಿಸಿದ್ದಾರೆ. ಅದನ್ನು ಖಚಿತಪಡಿಸಿಕೊಂಡು ದೂರವಾಣಿಯಲ್ಲೇ ಕಣ್ಣೀರು ಹಾಕಿದ್ದಾರೆ.

ಬುಧವಾರ ಭರತ್‌ ಅವರ ಸಹೋದರ ಪ್ರೇಮಕುಮಾರ, ಭಾವ ಪ್ರತಾಪ ಅವರು ನಗರಕ್ಕೆ ಬಂದು ಭರತ್‌ನನ್ನು ಜತೆಯಲ್ಲಿ ಕರೆದೊಯ್ದರು. ಇದಕ್ಕೂ ಮುನ್ನ ಭರತ್‌ನನ್ನು ನೋಡಿದ ತಕ್ಷಣ ಅವರ ಸಹೋದರ ಪ್ರೇಮಕುಮಾರ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಭರತ್‌ ಅವರ ಸಹೋದರನ ಜತೆಗೆ ಹೋಗುವುದಕ್ಕೂ ಮುನ್ನ ಶ್ರೀಧರ್‌ ನಾಯ್ಡು ಅವರನ್ನು ತಬ್ಬಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದರು.

‘ನನ್ನ ತಮ್ಮ ಮತ್ತೆ ಸಿಗುತ್ತಾನೋ ಇಲ್ಲವೋ ಎಂದು ಭಾವಿಸಿದ್ದೆವು. ಆದರೆ, ಶ್ರೀಧರ್‌ ಹಾಗೂ ಅವರ ಗೆಳೆಯರ ಕಾಳಜಿಯಿಂದ ನನ್ನ ತಮ್ಮ ಸಿಕ್ಕಿದ್ದಾನೆ. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು’ ಎಂದು ಪ್ರೇಮಕುಮಾರ ಹೇಳಿದರು.

‘ಯಾವ್ಯಾವುದೋ ಕಾರಣಕ್ಕೆ ಕೆಲವರು ಮನೆಯಿಂದ ದೂರವಾಗುತ್ತಾರೆ. ಅಂತಹವರು ಗಮನಕ್ಕೆ ಬಂದರೆ ತಿಳಿಸಿದರೆ ಪುನಃ ಅವರನ್ನು ಕುಟುಂಬದವರೊಂದಿಗೆ ಸೇರಿಸಲು ಪ್ರಯತ್ನಿಸಲಾಗುವುದು. ಅದಕ್ಕೆ ಜನ ಸಹಕರಿಸಬೇಕು. ಹೆಸರಿಗಾಗಿ ಈ ಕೆಲಸ ಮಾಡುತ್ತಿಲ್ಲ’ ಎಂದು ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಶ್ರೀಧರ್‌ ಹಾಗೂ ಅವರ ಗೆಳೆಯರು ಕೆಲ ತಿಂಗಳ ಹಿಂದೆ ಅನಾಥ ಹಿರಿಯ ಮಹಿಳೆಯೊಬ್ಬರನ್ನು ರಕ್ಷಿಸಿ, ಅನಾಥಾಶ್ರಮ ಸೇರಿಸಿ ಮಾನವೀಯತೆ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.