ADVERTISEMENT

ಅಧಿಕಾರಿಗಳ ಪರಿಶೀಲನೆಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 5:06 IST
Last Updated 27 ಅಕ್ಟೋಬರ್ 2017, 5:06 IST

ವಿಜಯಪುರ : ಹೋಬಳಿಯ ಕೋರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಹಿಪ್ಪುನೇರಳೆ ತೋಟಗಳಿಗೆ ಹುಳುಗಳು ಬೀಳುತ್ತಿದ್ದು, ರೇಷ್ಮೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ರೈತರಾದ ರಾಮಪ್ಪ, ಆಂಜಿನಪ್ಪ, ಕೆಂಪೇಗೌಡ ಮುಂತಾದವರು ತಿಳಿಸಿದ್ದಾರೆ.

ತೀವ್ರ ಮಳೆಗಳ ಕೊರತೆಯ ನಡುವೆಯು ಟ್ಯಾಂಕರುಗಳ ಮೂಲಕ ನೀರು ಹಾಯಿಸಿ ಹಿಪ್ಪುನೇರಳೆ ತೋಟಗಳನ್ನು ಸಂರಕ್ಷಣೆ ಮಾಡಿಕೊಂಡಿದ್ದೇವೆ. ನಾವು ರೇಷ್ಮೆ ಬೆಳೆಗಳನ್ನೆ ನಂಬಿಕೊಂಡು ಜೀವನ ಮಾಡಿಕೊಂಡಿದ್ದೇವೆ. ಇತ್ತಿಚೆಗೆ ಬಿದ್ದ ಮಳೆಯ ನಂತರ ಎಲ್ಲಾ ತೋಟಗಳಲ್ಲಿ ಹುಳುಗಳು ಬಿದ್ದಿವೆ.

ಹಿಪ್ಪುನೇರಳೆ ಗಿಡಗಳಲ್ಲಿನ ಚಿಗುರೆಲೆಗಳನ್ನು ತಿನ್ನುತ್ತಿರುವ ಹುಳುಗಳು ಕಾಂಡದವರೆಗೂ ಅಲ್ಲಲ್ಲಿ ಎಲೆಗಳನ್ನು ತಿಂದು ಹಾಕುತ್ತಿರುವುದರಿಂದ ರೇಷ್ಮೆಹುಳುಗಳಿಗೆ ಸೊಪ್ಪು ನೀಡಲು ಯೋಗ್ಯವಾಗಿಲ್ಲ, ಬೆಳೆ ಇಳುವರಿ ಬರುತ್ತಿಲ್ಲ ಎಂದರು.

ADVERTISEMENT

‘ಸತತವಾಗಿ ಮೂರು ನಾಲ್ಕು ವರ್ಷಗಳಿಂದ ಮಳೆಬಾರದೆ ಬಿತ್ತನೆ ಮಾಡಿದ ಬೆಳೆಗಳು ಕೈ ಸೇರದೆ ಕಂಗಾಲಾಗಿದ್ದ ರೈತ ಸಮೂಹಕ್ಕೆ ಹುಬ್ಬೆ, ಉತ್ತರೆ ಹಾಗೂ ಅತ್ತ ಚಿತ್ತ ಮಳೆಗಳು ಸಕಾಲಕ್ಕೆ ಸುರಿದ ಕಾರಣ ರೈತ ಸಮೂಹಕ್ಕೆ ಸಂತಸ ಧೈರ್ಯ ತಂದಿತ್ತು. ಮಳೆ ಬಿದ್ದ ಸಂತಸ ಬಹಳ ದಿನಗಳ ಕಾಲ ಉಳಿಯುವಂತಹ ಸೂಚನೆಗಳು ಕಂಡು ಬರುತ್ತಿಲ್ಲ’ ಎಂದಿದ್ದಾರೆ.

ಒಂದೊಂದು ಕೊಳವೆಬಾವಿ ಕೊರೆಯಿಸಬೇಕಾದರೆ ₹ 7 ರಿಂದ 8 ಲಕ್ಷದವರೆಗೂ ಸಾಲ ಮಾಡಿಕೊಂಡು ಬಂದು ಬಂಡವಾಳ ಹೂಡಿಕೆ ಮಾಡಿದ್ದೇವೆ. ಇಷ್ಟು ದಿನಗಳು ತೀವ್ರವಾದ ಉಷ್ಣಾಂಶದಿಂದ ಹಿಪ್ಪುನೇರಳೆ ಎಲೆಗಳಲ್ಲಿದ್ದ ನೀರಿನಾಂಶ ಕಡಿಮೆಯಾಗಿ, ಬೆಳೆಗಳು ಸರಿಯಾಗಿ ಆಗುತ್ತಿರಲಿಲ್ಲ, ಎಲೆಗಳು ಗಡುಸಾಗಿದ್ದವು. ಮಳೆಯಾದ ನಂತರ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಈ ರೀತಿಯಾಗಿ ಹುಳುಗಳು ಕಾಣಿಸಿಕೊಂಡು ತೋಟಗಳನ್ನು ಹಾಳು ಮಾಡುತ್ತಿವೆ. ಒಂದು ತೋಟದಿಂದ ತೋಟಕ್ಕೆ ಹಬ್ಬಿಕೊಳ್ಳುತ್ತಿವೆ ಬೆಳೆಗಳು ಈ ರೀತಿಯಾಗಿ ಕೈ ಕೊಡುತ್ತಿದ್ದರೆ, ಸಾಲ ತೀರಿಸುವುದು ಹೇಗೆ, ಜೀವನ ಸಾಗಿಸುವುದು ಹೇಗೆ ಎಂದರು.

ಒಂದು ಕಾಲದಲ್ಲಿ ಹಿಪ್ಪುನೇರಳೆ ಬೆಳೆಗೆ ಈ ಭಾಗದಲ್ಲಿ ಭಾರಿ ಬೇಡಿಕೆ ಇತ್ತು. ನಿಧಾನವಾಗಿ ರೇಷ್ಮೆ ಉತ್ಪಾದನೆಯೇ ಇಲ್ಲಿ ಮರೆಯಾಗುತ್ತಿದೆ. ನಾನು ನೋಡುತ್ತಿರುವಂತೆಯೇ ಕೃಷಿ ಚಟುವಟಿಕೆಗಳಲ್ಲಿ ಇಲ್ಲಿ ದೊಡ್ಡ ಬದಲಾವಣೆಯೇ ಆಗುತ್ತಿದೆ. ಗುಣಮಟ್ಟದ ರೇಷ್ಮೆ ಉತ್ಪಾದನೆಯಾಗಬೇಕಾದರೆ ಗುಣಮಟ್ಟದ ಹಿಪ್ಪುನೇರಳೆಯು ಮುಖ್ಯವಾಗಿದೆ.

ಅದನ್ನು ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಆದರೆ ರೇಷ್ಮೆಗೆ ಬಹುಮುಖ್ಯವಾಗಿ ಬೇಕಾಗಿರುವ ಹಿಪ್ಪುನೇರಳೆಗೆ ಸರ್ಕಾರ ಪ್ರೋತ್ಸಾಹ ಮಾಡುತ್ತಿಲ್ಲ, ಈ ರೀತಿ ನಷ್ಟವುಂಟಾದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡು, ರೋಗ ನಿವಾರಣೆಗಾಗಿ ಇಲಾಖೆಯಿಂದ ಔಷಧಿಗಳನ್ನು ವಿತರಣೆ ಮಾಡಬೇಕು ಎಂದು ರೈತ ಮುಖಂಡ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.