ADVERTISEMENT

ಆಗಸ್ಟ್ 7 ರಂದು ಸರ್ವಪಕ್ಷಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 8:50 IST
Last Updated 5 ಆಗಸ್ಟ್ 2013, 8:50 IST

ದೇವನಹಳ್ಳಿ: ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಲು ವಿಜಯಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿಸುವ ಹೋರಾಟಕ್ಕೆ ಸಂಬಂಧಿಸಿದಂತೆ ಆಗಸ್ಟ್ 7 ರಂದು ದೇವನಹಳ್ಳಿ ಗುರುಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ನಿರ್ಮಾಣ ಹೋರಾಟ ಸಮಿತಿ ಸಂಚಲಕ ಬಿ.ಕೆ.ಶಿವಪ್ಪ ತಿಳಿಸಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ದೇವನಹಳ್ಳಿ ತಾಲ್ಲೂಕಿನ ಇಪ್ಪತ್ನಾಲ್ಕಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಮತ್ತುಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಆಗಸ್ಟ್ 7 ರಂದು ನಡೆಯಲಿರುವ
ಈ ಸಭೆಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಸಭೆಗೆ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ, ಮಾಜಿ ಶಾಸಕ ವೆಂಕಟಸ್ವಾಮಿ, ಜಿ.ಚಂದ್ರಣ್ಣ, ಸೂ.ರಂ ರಾಮಯ್ಯ, ವಿ.ಮರಿಯಪ್ಪ, ಪಿ.ಮುನಿಶ್ಯಾಮಪ್ಪ, ಬಿ.ಜೆ.ಪಿ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ಸರ್ವ ಪಕ್ಷಗಳ ಪದಾಧಿಕಾರಿಗಳು, ತಾಲ್ಲೂಕು ವಕೀಲರ ಸಂಘ, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘಗಳು, ಪುರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಮಾಜಿ ಸದಸ್ಯರು, ರೈತ ಸಂಘಗಳು, ಸಹಕಾರಿ ಸಂಘಗಳ ಪ್ರತಿನಿಧಿಗಳು, ವರ್ತಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಾ.ಮೂರ್ತಿ ಮಾತನಾಡಿ, `ಜಿಲ್ಲಾ ನಿರ್ವಾಣವಾಗುವವರೆಗೂ ನಿರಂತರ ಹೋರಾಟ ಅನಿವಾರ್ಯವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆ ನಮ್ಮ ತಾಲ್ಲೂಕು ಸ್ಥಳವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂಬ ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಸ್ವಾತಂತ್ರ್ಯವಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹತೆ ಇರುವ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದೆಂದು ಹೇಳಿದ್ದಾರೆ. ಈ ದಿಸೆಯಲ್ಲಿ ದೇವನಹಳ್ಳಿ ಜಿಲ್ಲಾ ಕೇಂದ್ರವಾಗುವುದೆಂಬ ನಂಬಿಕೆ ತಾಲ್ಲೂಕಿನ ಜನತೆಗಿದೆ. ಈ ನಂಬಿಕೆ ಶೀಘ್ರವೇ ಸಾಕಾರವಾಗಲು ಎಲ್ಲರೂ ಪಕ್ಷಾತೀತವಾಗಿ ಹೋರಾಟವನ್ನು ಬೆಂಬಲಿಸಬೇಕು. ಸರ್ಕಾರದ ಮೇಲೆ ಒತ್ತಡ ತಂದರೆ ಮಾತ್ರ ತ್ವರಿತ ಫಲ ಸಾಧ್ಯ' ಎಂದರು.

ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಹೊಸಕೋಟೆ ನಾಗರಾಜ್ ಮಾತನಾಡಿ, `ರಾಮನಗರ ಜಿಲ್ಲಾ ಕೇಂದ್ರ ಘೋಷಣೆ ಮಾಡಿದ ಸಂದರ್ಭದಲ್ಲೇ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಬಹುದಿತ್ತು.

ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯವನವರು ಮನಸ್ಸು ಮಾಡಿದರೆ ಖಂಡಿತಾ ನಮ್ಮ ಬೇಡಿಕೆ ಈಡೇರುತ್ತದೆ. ಇದಕ್ಕಾಗಿ ನಿರಂತರ ಹೋರಾಟ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರೂ ಹೋರಾಟಕ್ಕೆ ಬೆಂಬಲಿಸಬೇಕು' ಎಂದು ಅವರು ಮನವಿ ಮಾಡಿದರು.

ತಾಲ್ಲೂಕು ಮಾನವ ಜಾಗೃತಿ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ಜಾಲಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಎಂ.ಆನಂದ್  ಕುಮಾರ್  ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.