ADVERTISEMENT

ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 5:35 IST
Last Updated 18 ಮಾರ್ಚ್ 2011, 5:35 IST

ಆನೇಕಲ್: ಹೈನುಗಾರಿಕೆ ರೈತರ ಬಾಳಿನ ಬೆಳಕು. ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ. ಬೆಂಗಳೂರು ಹಾಲು ಒಕ್ಕೂಟವು ಭಾರತದಲ್ಲಿನ ಎಲ್ಲಾ ಒಕ್ಕೂಟಗಳಿಗಿಂತ ರಾಜ್ಯದಲ್ಲಿ ರೈತರಿಗೆ ಹೆಚ್ಚಿನ ಬೆಲೆ ನೀಡಿ ಹಾಲನ್ನು ಖರೀದಿಸುತ್ತಿದೆ ಎಂದು ಬಮುಲ್ ನಿರ್ದೇಶಕ ಆರ್.ಕೆ.ರಮೇಶ್ ನುಡಿದರು. ಅವರು ತಾಲ್ಲೂಕಿನ ಕಲ್ಲುಬಾಳು ಹಾಲು ಉತ್ಪಾದಕರ ಸಂಘ ಹಾಗೂ ಬೆಂಗಳೂರು ಹಾಲು ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ 176 ಹಾಲು ಒಕ್ಕೂಟಗಳಿದ್ದು ಪ್ರತಿ ಲೀಟರ್ ಹಾಲಿಗೆ 21 ರೂ. ಹಣ ನೀಡುತ್ತಿರುವ ಏಕೈಕ ಸಂಸ್ಥೆ ಬೆಂಗಳೂರು ಹಾಲು ಒಕ್ಕೂಟವಾಗಿದೆ. ಗುಜರಾತ್‌ನ ಅಮುಲ್ ಒಕ್ಕೂಟ ರೈತರನ್ನು ಶೋಷಣೆ ಮಾಡುತ್ತಿದೆ. ಹಾಲು ಉತ್ಪಾದಕ ರೈತರಿಗೆ ಲೀಟರ್‌ಗೆ 13 ರೂ. ನೀಡಿ, 26ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ ಎಂದು ನುಡಿದರು. ಒಕ್ಕೂಟದ ‘ಜನಶ್ರೀ ಬಿಮಾ’ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಒಕ್ಕೂಟದ ಪಾಲಿನಿಂದ ವಿಮೆ ಮಾಡಿಸಲಾಗುವುದು. ರೈತರು 100ರೂ. ಪಾವತಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.

ಕಲ್ಯಾಣ ಟ್ರಸ್ಟ್‌ನಿಂದ ಹಾಲು ಉತ್ಪಾದಕರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ, ಹುಲ್ಲು ಕತ್ತರಿಸುವ ಹಾಗೂ ಹಾಲು ಕರೆಯುವ ಯಂತ್ರಗಳ ಖರೀದಿಗೆ ಶೇ. 60ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಜನಾರ್ದನರೆಡ್ಡಿ ಮಾತನಾಡಿ, ನಬಾರ್ಡ್ ನೆರವಿನಿಂದ ಹತ್ತು ಹಸುಗಳ ಖರೀದಿಗೆ 5 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುವುದು. ಇದರಲ್ಲಿ 1.25ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ ಎಂದರು.

ಬಮುಲ್‌ನ ನಾಮ ನಿರ್ದೇಶಿತ ಸದಸ್ಯ ಬಿ.ಜಿ.ಆಂಜಿನಪ್ಪ ಮಾತನಾಡಿದರು. ಪ್ರದರ್ಶನದಲ್ಲಿ 160ಕ್ಕೂ ಹೆಚ್ಚು ಹಸು-ಕರುಗಳು ಪಾಲ್ಗೊಂಡಿದ್ದವು.  ಮಹಂತಲಿಂಗಾಪುರದ ರಮೇಶ್ ಅವರ ಕರುವಿಗೆ ಪ್ರಥಮ ಬಹುಮಾನ ದೊರೆಯಿತು. ಸಂಪಂಗಿ ಹಾಗೂ ವೆಂಕಟೇಶ್ ಅವರು ದ್ವಿತೀಯ, ತೃತೀಯ ಬಹುಮಾನ ಪಡೆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಬಿ.ಐ ನಾಗರಾಜು, ವಿ.ಎಸ್.ಎಸ್.ಎನ್ ಅಧ್ಯಕ್ಷ ಅನಂತಪದ್ಮನಾಭ ಶಾಸ್ತ್ರಿ, ಡಾ.ವಿಶ್ವನಾಥ್, ಗ್ರಾ.ಪಂ ಅಧ್ಯಕ್ಷ ಪಿಳ್ಳಪ್ಪ, ಹಾಲು ಉತ್ಪಾದಕರ ಸಂಘದ ಎಂ.ನಾರಾಯಣರೆಡ್ಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.