ADVERTISEMENT

ಆಸೆಗಳಿಗೆ ಮಿತಿ ಇದ್ದರೆ ಬದುಕು ಸಾರ್ಥಕ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 5:45 IST
Last Updated 19 ಜೂನ್ 2012, 5:45 IST

ವಿಜಯಪುರ: ಸಾಮಾಜಿಕ ಕಳಕಳಿ ಇದ್ದಲ್ಲಿ ಸೇವಾ ಮನೋಭಾವ ಇರುತ್ತದೆ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರಿಮತಿ ಸಾವಿತ್ರಮ್ಮ ಅವರ 4 ನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ಸುಮಿತ್ರಮ್ಮ ಕೆ. ರುದ್ರಪ್ಪ ಧರ್ಮದತ್ತಿ ವತಿಯಿಂದ ಅಬಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ವೃದ್ಧರಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲವೂ ತನಗೇ ಬೇಕೆಂದು ಹಂಬಲಿಸುವ ಮನುಷ್ಯ ತನ್ನ ಆಸೆಗಳನ್ನು ಮಿತಿಯಲ್ಲಿಟ್ಟುಕೊಂಡು ಸಮಾಜದ ಒಳಿತಿಗಾಗಿ ಅಳಿಲು ಸೇವೆ ಮಾಡಬೇಕು. ದಾನ ಪಡೆದವನು ತಾನು ಪಡೆದ ದಾನವನ್ನು ಮುಂದೆ ಮತ್ತೊಬ್ಬರಿಗೆ ಕೊಡುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಊರಿನ ಹಿರಿಯರಾದ ಎ.ಎನ್.ರಾಮಬಸಪ್ಪ ಮಾತನಾಡಿ, ಸತ್ತ ನಂತರವೂ ನಾವು ಮಾಡಬಹುದಾದ ಪುಣ್ಯ ಕಾರ್ಯವೆಂದರೆ ದಾನ. ಧರ್ಮದತ್ತಿಗಳು ಅಬಲರಿಗಾಗಿ ಮಾಡುವ ಸಹಾಯ ನಿರಂತರವಾಗಿ ವ್ಯಕ್ತಿಯ ನಂತರವೂ ಅವರನ್ನು ಸ್ಮರಿಸುವಂತೆ ಮಾಡುತ್ತವೆ ಎಂದರು.

ಹಿರಿಯ ಪತ್ರಕರ್ತ ಕೆ. ರುದ್ರಪ್ಪ ಮಾತನಾಡಿ, ಸಮಾಜದ ಒಳಿತಿಗಾಗಿ ಯಾವುದೇ ರೂಪದಲ್ಲಿ ಸಹಾಯ ಮಾಡಲು ಇಚ್ಛಿಸಿದರೂ ಅದು ಮನಸ್ಸಿಗೆ ಸಮಾಧಾನ ನೀಡುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ಸಾಹಿತಿ ಎಂ.ವೀರಣ್ಣ ಮಾತನಾಡಿ, ಸರ್ಕಾರವು ಅಬಲರಿಗಾಗಿ ಮಾಡುವ ಸೇವೆಯನ್ನು ತಮ್ಮ ಆತ್ಮೀಯರ ಸ್ಮರಣೆಯ ಅಂಗವಾಗಿ ಧರ್ಮದತ್ತಿಯಿಂದ ಮಾಡುತ್ತಿರುವುದು ಶ್ಲಾಘನೀಯವೆಂದರು.

ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ಮಾತನಾಡಿ, ಹೊಲಿಗೆ ಯಂತ್ರಗಳ ವಿತರಣೆಯು ಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಾವಲಂಬಿಯಾಗಲು ಪ್ರೋತ್ಸಾಹದಾಯಕವಾಗಿದೆ ಎಂದು ತಿಳಿಸಿದರು.
ವ್ಯವಸ್ಥಾಪಕ ಧರ್ಮದರ್ಶಿ ಕೆ.ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ 20 ಮಂದಿ ವೃದ್ಧರಿಗೆ ಆರ್ಥಿಕ ನೆರವನ್ನು ಹಾಗೂ 12 ಮಹಿಳೆಯರಿಗೆ  ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ರು.ಬಸಪ್ಪ, ಮಾತೃ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಬಸವರಾಜ್, ದಯಾಶಂಕರ್, ಧರ್ಮದತ್ತಿ ಆಡಳಿತ ಮಂಡಳಿ ಸದಸ್ಯರಾದ ವೀಣಾ ಡಾ.ರವಿ, ಅನ್ನಪೂರ್ಣ ಶಂಕರ್, ಕೆ.ಸಿ. ಜಯಕುಮಾರ್, ಉಮಾ ಮಹೇಶ್ವರಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.