ADVERTISEMENT

ಆಸ್ಪತ್ರೆಗೆ ಮೂಲಸೌಲಭ್ಯ: ಮನವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಆನೇಕಲ್: ತಾಲ್ಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಮತ್ತು ತಾಲ್ಲೂಕು ಜೆಡಿಎಸ್ ಘಟಕದ ಮುಖಂಡರು ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಆಸ್ಪತ್ರೆಗಳಿಗೆ ಅವಶ್ಯಕವಿರುವ ಎಕ್ಸರೇ ಯಂತ್ರ, ಸ್ಕ್ಯಾನಿಂಗ್ ಯಂತ್ರಗಳನ್ನು  ಸರಬರಾಜು ಮಾಡಿ ಅವುಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಮಾಡಬೇಕು. ಖಾಲಿಯಿರುವ ದಾದಿಯರ ಹುದ್ದೆಗಳನ್ನು ಕೂಡಲೇ ತುಂಬಬೇಕು. ನೇಮಕಾತಿ ಆಗುವವರೆಗೆ ತಾತ್ಕಾಲಿತವಾಗಿ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.

ವೈದ್ಯರ ವಸತಿ ಗೃಹಗಳನ್ನು ನವೀಕರಿಸಿ, ವೈದ್ಯರು ಕಡ್ಡಾಯವಾಗಿ ವಸತಿ ಗೃಹಗಳಲ್ಲಿ ವಾಸ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅವಶ್ಯಕವಿದ್ದಲ್ಲಿ ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ದೊರಕಿಸಿ ಕೊಡಲು ಪಕ್ಷದ ವತಿಯಿಂದ ಒತ್ತಡ ಹಾಕುವುದಾಗಿ ಜೆಡಿಎಸ್ ತಾಲ್ಲೂಕು ಮಹಾ ಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ ತಿಳಿಸಿದರು.

ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಅವರು ಮಾತನಾಡಿ, ತಾಲ್ಲೂಕಿನ ಅತ್ತಿಬೆಲೆಯ ಸರ್ಕಾರಿ ಆಸ್ಪತ್ರೆಯನ್ನು 30 ಹಾಸಿಗೆಗಳ ಆಸ್ಪತ್ರಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಕನ್ನಡ ಸೋಮು, ವರದರಾಜು, ನಾಗರಾಜು, ಶೀನಪ್ಪ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.