ADVERTISEMENT

ಕಿಡ್ನಿ ವೈಫಲ್ಯದ ಮೂಕವೇದನೆಗೆ ಬೇಕಿದೆ ಆಸರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 5:10 IST
Last Updated 23 ಜೂನ್ 2012, 5:10 IST

ಆನೇಕಲ್: ಈ ಕುಟುಂಬದ ಎಲ್ಲ ಸದಸ್ಯರು ಮೂಕರು. ಯಾರ ಹಂಗಿಗೂ ಒಳಗಾಗದೆ ಕುಟುಂಬದ ಮುಖ್ಯಸ್ಥ ಬದುಕಿನ ಬಂಡಿ ಎಳೆಯುತ್ತಿದ್ದ. ಆದರೆ ಸಿಡಿಲಿನಂತೆ ಎರಗಿದ ಕಿಡ್ನಿ ವೈಫಲ್ಯ ಈ ಕುಟುಂಬದ ವೇದನೆಯನ್ನು ಮೂಕವಾಗಿಯೇ ಕಳೆಯುವಂತೆ ಮಾಡಿದೆ.

ತಾಲ್ಲೂಕಿನ ಇಚ್ಚಂಗರೂ ವಡ್ಡರಪಾಳ್ಯದ ನಾಗರಾಜುನ ಕುಟುಂಬವೇ ಈ ಮೂಕವೇದನೆ ಅನುಭವಿಸುತ್ತಿರುವ ಕುಟುಂಬ. ಹುಟ್ಟು ಮೂಕರಾದ ನಾಗರಾಜು ಅವರು 10 ವರ್ಷಗಳ ಹಿಂದೆ ತಾಲ್ಲೂಕಿನ ಕುತಾಗಾನಹಳ್ಳಿಯ ಮಾತು ಬಾರದ ಮಂಜುಳ ಅವರನ್ನು ವಿವಾಹವಾದರು. ನಂತರ ಇವರಿಗೆ ಜನಿಸಿದ ಮಂಜುನಾಥ(08), ಚಂದ್ರಶೇಖರ (03) ಎಂಬ ಗಂಡು ಮಕ್ಕಳೂ ಹುಟ್ಟುತ್ತಲೇ ಮೂಕತ್ವ ಪಡೆದರು.

ಆದರೆ ಈ ಯಾವ ಲೋಪವು ಈ ಕುಟುಂಬವನ್ನು ಕಾಡಿರಲಿಲ್ಲ. ಕಾರ್ಖಾನೆಯಲ್ಲಿ ನೌಕರಿ ಮಾಡಿ ನಾಗರಾಜು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಕಿಡ್ನಿ ವೈಫಲ್ಯಕ್ಕೆ ನಾಗರಾಜು ತುತ್ತಾದ ನಂತರ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ಹೆಂಡತಿ ಕೂಲಿ ಮಾಡಿ ಕುಟುಂಬವನ್ನು ಸಾಗಿಸಬೇಕಾಗಿದ್ದು, ನಾಗರಾಜು ಚಿಕಿತ್ಸೆಗೆ ಹಣ ಹೊಂದಿಸಲು ಹರಸಾಹಸ ಪಡಬೇಕಾಗಿದೆ. 

 ನಾಗರಾಜು ನಾರಾಯಣ ಹೃದಯಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದು, ಕನಿಷ್ಠ 5ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದರು. ಅಷ್ಟೊಂದು ಹಣ ಭರಿಸುವ ಸಾಮರ್ಥ್ಯ ಕುಟುಂಬಕ್ಕಿಲ್ಲ ಎಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸರೋಜ ಮತ್ತು ಮೊಬಿಲಿಟಿ ಇಂಡಿಯಾದ ಮಾರ್ಗದರ್ಶಕ ಮಂಜುನಾಥ್ ತಿಳಿಸಿದರು. ಕಳೆದ ಎಂಟು ತಿಂಗಳಿನಿಂದ ಅಂಗವಿಕಲ ವೇತನಕ್ಕೂ ಸಂಚಕಾರ ಬಂದಿದೆ. ವೇತನ ತಡೆಯಿಡಿಯಲಾಗಿದೆ. ಸರಿಯಾದ ಕಾರಣ ತಿಳಿಯುತ್ತಿಲ್ಲ ಎಂದು ಮಂಜುನಾಥ್ ಹೇಳುತ್ತಾರೆ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು ಶೇ.3ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಸ್ಥಳೀಯ ಸಂಸ್ಥೆಗಳಿಗೆ ಸಹ ಮನವಿ ಮಾಡಲಾಗಿದೆ. ಆದರೆ ನೆರವು ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಕುಟುಂಬಕ್ಕೆ ನೆರವು ನೀಡ ಬಯಸುವ ದಾನಿಗಳು ಅತ್ತಿಬೆಲೆಯ ಸಿಂಡಿಕೇಟ್ ರೈತರ ಸೇವಾ ಸಹಕಾರ ಬ್ಯಾಂಕ್‌ನ ಜಿ.ನಾಗರಾಜು ಅವರ ಖಾತೆ ಸಂಖ್ಯೆ 3748ಕ್ಕೆ ಧನಸಹಾಯ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.