ದೊಡ್ಡಬಳ್ಳಾಪುರ: ಜನರ ನಿರ್ಲಕ್ಷ್ಯ ಹಾಗೂ ಸುಡು ಬೇಸಿಗೆಯ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಬೆಟ್ಟದಲ್ಲಿ ಬತ್ತಿ ಹೋಗಿದ್ದ ಕಲ್ಯಾಣಿಯಲ್ಲಿ ಹೂಳೆತ್ತುವ ಮೂಲಕ ಮತ್ತೆ ನೀರು ತುಂಬಿಕೊಳ್ಳುವಂತೆ ಮಾಡಿದ ವಿದ್ಯಾರ್ಥಿಗಳ ಸಾಧನೆ ಇದು.
ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟಕ್ಕೆ ಪ್ರತಿದಿನ ಬೆಟ್ಟದ ಸುತ್ತಲಿನ ಐದಾರು ಗ್ರಾಮಗಳ ದನ, ಕರು, ಮೇಕೆ, ಕುರಿಗಳು ಮೇಯಲು ಬೆಳಿಗ್ಗೆ ಬೆಟ್ಟಕ್ಕೆ ಹೋದರೆ ಮತ್ತೆ ಸಂಜೆಗೆ ಮನೆಗೆ ಹಿಂತಿರುಗುತ್ತಿದ್ದವು. ಆದರೆ ಬೆಟ್ಟದಲ್ಲಿ ಬಾಯಾರಿಕೆಯಾದಾಗ ಕುಡಿಯಲು ಇಡೀ ಬೆಟ್ಟದಲ್ಲಿ ಎಲ್ಲಿಯೂ ನೀರು ಇಲ್ಲವಾಗಿತ್ತು.
ದನ,ಕರುಗಳು ಸೇರಿದಂತೆ ಬೆಟ್ಟದಲ್ಲಿನ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ದೊರೆಯಲಿ ಎಂದು ಹಿರಿಯರು ನಿರ್ಮಿಸಿದ್ದ ಕಲ್ಯಾಣಿ ಹೂಳಿನಿಂದ ತುಂಬಿ ಹೋಗಿತ್ತು. ಇತ್ತೀಚೆಗೆ ಬೆಟ್ಟದ ತಪ್ಪಲಿನಲ್ಲಿ ಬೆಂಗಳೂರಿನ ಸರ್ಕಾರಿ ಆರ್.ಸಿ.ವಾಣಿಜ್ಯ ಮತ್ತು ನಿರ್ವಾಹಣಾ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ ವಾರ್ಷಿಕ ಶಿಬಿರದ ಅಂಗವಾಗಿ ನಡೆದ ಶ್ರಮದಾನದಲ್ಲಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಬೆಟ್ಟದಲ್ಲಿನ ಕಲ್ಯಾಣಿ ಸುತ್ತ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ ಹೂಳು ತೆಗೆದಿದ್ದರು.
ಹೂಳು ತೆಗೆದ ಒಂದೇ ದಿನದಲ್ಲಿ ಕಲ್ಯಾಣಿಯಲ್ಲಿ ನೀರು ತುಂಬಿ ನಿಂತಿತು. ಇದರಿಂದಾಗಿ ಇಂದು ಬೆಟ್ಟಕ್ಕೆ ಹುಲ್ಲು ಮೇಯಲು ಹೋಗುವ ದನಗಳು, ಪ್ರಾಣಿ, ಪಕ್ಷಿಗಳು ಕಲ್ಯಾಣಿಯಲ್ಲಿ ನೀರು ಕುಡಿಯುತ್ತಿವೆ.
ವಿದ್ಯಾರ್ಥಿಗಳು ಈ ಸೇವೆಯನ್ನು ಚನ್ನರಾಯಸ್ವಾಮಿ ಬೆಟ್ಟದ ಸುತ್ತಲಿನ ದೊಡ್ಡರಾಯಪ್ಪನಹಳ್ಳಿ, ಚಿಕ್ಕರಾಯಪ್ಪನಹಳ್ಳಿ, ಚನ್ನಾಪುರ ಗ್ರಾಮಗಳ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.