ADVERTISEMENT

‘ಜನರ ಸಮಸ್ಯೆ ಮರೆತ ಕೇಂದ್ರ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:26 IST
Last Updated 21 ನವೆಂಬರ್ 2017, 6:26 IST
ತಾಲ್ಲೂಕು ಕಾರ್ಯದರ್ಶಿ ಎಸ್‌.ರುದ್ರಾರಾಧ್ಯ ಮಾತನಾಡಿದರು
ತಾಲ್ಲೂಕು ಕಾರ್ಯದರ್ಶಿ ಎಸ್‌.ರುದ್ರಾರಾಧ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ರೈತರು, ಕಾರ್ಮಿಕರು ತಮಗೆ ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸುವುದು ಅನಿವಾರ್ಯ. ಈ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯ ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್‌.ನಾಗರಾಜ್‌ ಹೇಳಿದರು. ನಗರದಲ್ಲಿ ಸೋಮವಾರ ನಡೆದ ಪಕ್ಷದ ಏಳನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯನ್ನು ವಿಸ್ತಾರವಾಗಿ ಬೆಳೆಸಬೇಕು. ಗರಿಷ್ಠ ಮುಖಬೆಲೆಯ ನೋಟುಗಳ ರದ್ಧತಿ ನಂತರ ದೇಶದಲ್ಲಿ ಜನರ ಸಮಸ್ಯೆಗಳನ್ನು ಮರೆಮಾಚಲು ಹಿಂದುತ್ವ, ಗೋ ಹತ್ಯೆ ನೆಪಗಳನ್ನು ಜನರ ಮುಂದಿಡುತ್ತ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್‌ ಆಡಳಿತವೂ ಬಿಜೆಪಿ ಅವರಿಗಿಂತಲು ಭಿನ್ನವಾಗಿಲ್ಲ. ಬಡವರ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಕಡಿವಾಣಕ್ಕೆ ಜಾರಿಗೊಳಿಸಲು ಕಾಯ್ದೆ ಜಾರಿಗೆ ತರಬೇಕಾಗಿತ್ತು. ಆದರೆ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದು ಹಲ್ಲು ಇಲ್ಲದ ಕಾಯ್ದೆ ಮಂಡನೆಗೆ ಸರ್ಕಾರ ಮುಂದಾಗಿದೆ. ಆಧಾರ್‌ ಕಾರ್ಡ್‌ ಕಡ್ಡಾಯ ಕಾರ್ಮಿಕರ ವಿರೋಧಿಯಾಗಿದೆ. ಇದರಲ್ಲಿ ಹಲವಾರು ಅಡೆತಡೆಗಳಿವೆ. ಹೀಗಾಗಿ ಆಧಾರ್‌ ಕಡ್ಡಾಯಗೊಳಿಸುವ ಕ್ರಮ ಖಂಡನೀಯ ಎಂದರು.

ADVERTISEMENT

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ ಮಾತನಾಡಿ, ರಾಜ್ಯದ ಜನರಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆ. ಇದರಿಂದಲೇ ರಾಜಕೀಯ ಅರಿವಿನ ಕೊರತೆ ಇದೆ. ಇವತ್ತು ಸತ್ಯ ಹೇಳುವ ಆಸಕ್ತಿ ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ದೇಶದಲ್ಲಿನ ನರೇಂದ್ರಮೋದಿ ಆಡಳಿತ ಮುಳುಗುತ್ತಿದೆ ಎಂದರು.

ಇದನ್ನು ಉಳಿಸಲು ಕೆಲ ಮಾಧ್ಯಮಗಳು ಸ್ಪರ್ಧೆಗೆ ಇಳಿದವಂತೆ ವರ್ತಿಸುತ್ತಿವೆ. ದೇಶದ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಸಿಪಿಎಂ ಕಾರ್ಯಕರ್ತರು ಜನರಿಗೆ ಸತ್ಯವನ್ನು ಹೇಳುವ ಮೂಲಕ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದರು.

‘ನಮ್ಮಲ್ಲಿ ಎರಡು ದೇಶಗಳಿವೆ. ಒಂದು ಹಸಿವಿನ ಭಾರತ ಮತ್ತೊಂದು ಸಂತೃಪ್ತ ಭಾರತ. ಈ ಅಸಮಾನತೆಯ ಭಾರತವನ್ನು ತೊಡೆದುಹಾಕಬೇಕು. ಬಸವ, ಕನಕದಾಸರು ಇವತ್ತು ಓಟ್‌ ಬ್ಯಾಂಕ್‌ ಆಗುತ್ತಿರುವುದು ಈ ನಾಡಿನ ದುರಂತದ ಸಂಗತಿ. ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಟನೆಗಳು ಇರಬೇಕಾದ ಸ್ಥಳಗಳಲ್ಲಿ ಜಾತಿ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಇದು ಕಾರ್ಮಿಕ ಸಂಘಟನೆಯನ್ನು ದುರ್ಬಲಗೊಳಿಸಲಿದೆ’ ಎಂದರು.

ತಾಲ್ಲೂಕು ಕಾರ್ಯದರ್ಶಿ ಎಸ್‌.ರುದ್ರಾರಾಧ್ಯ ಮಾತನಾಡಿ, ಕೇರಳ, ತ್ರಿಪುರ ರಾಜ್ಯಗಳ ಆಡಳಿತ ಇವತ್ತು ಇಡೀ ದೇಶಕ್ಕೆ ಮಾದರಿಯಾಗಬೇಕಿದೆ. ಆದರೆ, ಇದು ಇವತ್ತು ಯಾರಿಗೂ ಕಾಣಿಸುತ್ತಿಲ್ಲ. ನೇಕಾರರಿಗೆ ಮಾರಕವಾಗಿ ಪರಿಣಮಿಸಿರುವ ಜಿಎಸ್‌ಟಿಯಿಂದ ಪೂರ್ಣ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ದೇಶದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲೆ ಉದ್ಯಮಿಗಳ ಬಂಡವಾಳ ಶೇ 67ರಷ್ಟು ಹೆಚ್ಚಾಗಿದೆ. ಜನರಿಗೆ ಸಂವಿಧಾನಬದ್ಧವಾಗಿ ಬಂದಿರುವ ಹಕ್ಕುಗಳಿಗೂ ಚ್ಯುತಿ ಬಂದಿದೆ. ಕರ್ನಾಟಕದಲ್ಲಿ ಶೇ 70ರಷ್ಟು ಭ್ರಷ್ಟಾಚಾರ ಇದ್ದರೆ, ಕೇರಳದಲ್ಲಿ ಶೇ4ರಷ್ಟು ಇದೆ ಎಂದರು.

ಸಿಐಟಿಯು ತಾಲ್ಲೂಕು ಅಧ್ಯಕ್ಷ ರೇಣುಕಾರಾಧ್ಯ, ಪಿ.ಎ.ವೆಂಕಟೇಶ್‌, ತಾಲ್ಲೂಕು ಸಮಿತಿ ಸದಸ್ಯರಾದ ಕೆ.ರಘುಕುಮಾರ್‌, ಗೌಡಪ್ಪ, ಸಿ.ಅಶ್ವತ್ಥ್, ಆದಿನಾರಾಯಣರೆಡ್ಡಿ, ಎಲ್‌.ಶಿವಕುಮಾರ್‌ ಭಾಗವಹಿಸಿದ್ದರು.

ಕನಿಷ್ಠ ಕೂಲಿ ಹೆಚ್ಚಲಿ
ಜಿ.ಎನ್‌.ನಾಗರಾಜ್‌ ಮಾತನಾಡಿ, ದೇಶದಲ್ಲಿ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಸಾಲ ದೊರೆತಿದ್ದು ಯುಪಿಎ ಅಧಿಕಾರದ ಅವಧಿಯಲ್ಲಿ ಇದನ್ನು ಮೋದಿ ಆಡಳಿತ ಮತ್ತಷ್ಟು ತ್ವರಿತ, ಸಾಲದ ಪ್ರಮಾಣವನ್ನು ಹೆಚ್ಚು ಮಾಡಿದೆ. ಕೈಗಾರಿಕೆಗಳು ಬೃಹತ್‌ ನಗರಗಳಿಗಷ್ಟೇ ಸೀಮಿತವಾಗದೆ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆಯಾಗಬೇಕು ಎಂದರು.

ಆಗ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ಕನಿಷ್ಠ ಕೂಲಿ ₹ 18,000 ನಿಗದಿ ಮಾಡಿದಾಗ ಮಾತ್ರ ಜನರ ಜೀವನ ಮಟ್ಟ ಸುಧಾರಣೆಯಾಗಲು ಸಾಧ್ಯವಾಗಲಿದೆ. ಇಲ್ಲವಾದರೆ ದೆಹಲಿಗೆ ಆದ ಗತಿಯೇ ಇತರೆ ನಗರಗಳಿಗೂ ಆಗಲಿದೆ ಎಂದು ಎಚ್ಚರಿಸಿದರು.

* * 

ಕೇಂದ್ರದ ಜನವಿರೋಧಿ ಆಡಳಿತವನ್ನು ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ಅದು ಸುಳ್ಳು ಪ್ರಚಾರಗಳಿಂದ ಜನರನ್ನು ಭ್ರಮಾಲೋಕದಲ್ಲಿ ಮುಳುಗಿಸುತ್ತಿದೆ
ಎಸ್‌.ರುದ್ರಾರಾಧ್ಯ ,
ತಾಲ್ಲೂಕು ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.