ADVERTISEMENT

ಜಿಪಂಗೆ 18, ತಾಪಂಗೆ 35 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 11:39 IST
Last Updated 30 ಜನವರಿ 2016, 11:39 IST
ಆನೇಕಲ್‌ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿ ಕಾರಿಗಳಾದ ಶಿವಸ್ವಾಮಿ ಹಾಗೂ ಎಂ.ಎಸ್.ಎನ್. ಬಾಬು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ತಹಶೀಲ್ದಾರ್ ಅನಿಲ್‌ಕುಮಾರ್ ಚಿತ್ರದಲ್ಲಿದ್ದಾರೆ
ಆನೇಕಲ್‌ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿ ಕಾರಿಗಳಾದ ಶಿವಸ್ವಾಮಿ ಹಾಗೂ ಎಂ.ಎಸ್.ಎನ್. ಬಾಬು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ತಹಶೀಲ್ದಾರ್ ಅನಿಲ್‌ಕುಮಾರ್ ಚಿತ್ರದಲ್ಲಿದ್ದಾರೆ   

ಆನೇಕಲ್ :  ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಫೆ.13 ರಂದು ನಡೆಯಲಿರುವ ಚುನಾವಣೆಗೆ ತಾಲ್ಲೂಕಿನ 15 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 18 ನಾಮಪತ್ರಗಳು ಮತ್ತು 30 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಇದುವರೆಗೆ 35 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚುನಾವಣಾಧಿಕಾರಿ ಶಿವಸ್ವಾಮಿ ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿ ತಾಲ್ಲೂಕಿನ 15 ಜಿಲ್ಲಾ ಪಂಚಾಯಿತಿ ಹಾಗೂ 30 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 2,64,421 ಮತದಾರರು ಮತಚಲಾಯಿಸಲಿದ್ದಾರೆ. 1,27,797 ಮಂದಿ ಮಹಿಳೆಯರು ಹಾಗೂ 1,36,630 ಮಂದಿ ಪುರುಷ ಮತದಾರರು ಇದ್ದಾರೆ.

277 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಈ ಪೈಕಿ 44 ಸೂಕ್ಷ್ಮ ಹಾಗೂ 64 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಮತದಾರರಿಗೆ ಹಣ ಮತ್ತಿತರ ವಸ್ತುಗಳ ಮೂಲಕ ಆಮಿಷವೊಡ್ಡುವುದು ಕಂಡು ಬಂದಲ್ಲಿ ಕೂಡಲೇ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕೆಂದು ತಿಳಿಸಿದರು.

ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ತಾಲ್ಲೂಕಿನಲ್ಲಿ 4 ತಂಡಗಳನ್ನು ರಚಿಸಲಾಗಿದ್ದು ತಂಡಗಳು ದಿನದ 24 ಗಂಟೆಗಳು ಸಹ ಕಾರ್ಯನಿರ್ವಹಿಸಲಿದೆ. ಒಂದು ತಂಡದಲ್ಲಿ ಪಿಡಿಓ, ಎಎಸ್‌ಐ, ಅಬಕಾರಿ ರಕ್ಷಕ, ಗ್ರಾಮ ಸಹಾಯಕ ಇದ್ದು ತಾಲ್ಲೂಕು ಮಟ್ಟದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡ ಕಾರ್ಯ ನಿರ್ವಹಿಸಲಿದೆ. 

ರಾಜಕೀಯ ಪಕ್ಷಗಳು ಚುನಾವಣಾ ಸಭೆ ನಡೆಸುವ ದಿನಾಂಕ, ಸ್ಥಳದ ಬಗ್ಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು ಬ್ಯಾನರ್, ಕಟೌಟ್‌ಗಳು, ಸಭೆ ಪ್ರಾರಂಭ ಮುನ್ನಾ ಹಾಕಿ ಸಭೆ ಮುಗಿದ 1 ಗಂಟೆಯಲ್ಲಿ ತೆರವು ಗೊಳಿಸಬೇಕು, ಒಂದು ವೇಳೆ ತೆರವುಗೊಳಿಸದೆ ಇದ್ದರೆ ನಾವೇ ತೆರವುಗೊಳಿಸುತ್ತವೆ ಅದರ ಖರ್ಚುನ್ನು ಅಭ್ಯರ್ಥಿಯ ಲೆಕ್ಕಕ್ಕೆ ಹಾಕಲಾಗುವುದು. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಿಯಾದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕಂಡು ಬಂದರೆ  ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು 080– 27859234 ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.