ADVERTISEMENT

ಜಿಲ್ಲೆಯಲ್ಲಿ 247 ಎಚ್‌ಐವಿ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 8:20 IST
Last Updated 9 ಡಿಸೆಂಬರ್ 2017, 8:20 IST

ದೇವನಹಳ್ಳಿ: ಪ್ರಸ್ತುತ ಗ್ರಾಮಾಂತರ ಜಿಲ್ಲೆಯಲ್ಲಿ 247 ಎಚ್‌ಐವಿ ಸೋಂಕಿತರು ಇದ್ದಾರೆ ಎಂದು ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಶಖಿಲಾ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟು 7,422 ಎಚ್‌ಐವಿ ಸೋಂಕಿತರಿದ್ದಾರೆ. ಈ ಹಿಂದಿನ ಮಾಹಿತಿ ಗಮನಿಸಿದರೆ ಶೇಕಡವಾರು ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಎಚ್‌ಐವಿ ಒಬ್ಬ ವ್ಯಕ್ತಿಯ ಸಮಸ್ಯೆಯಾಗದೆ ಸಮಾಜದ ಅಭಿವೃದ್ಧಿಗೆ ಸವಾಲಾಗಿದೆ. ಜನಸಾಮಾನ್ಯರಲ್ಲಿ ಎಚ್‌ಐವಿ ಸೋಂಕು ಮತ್ತು ಸೋಂಕಿನೊಂದಿಗೆ ಬದುಕುತ್ತಿರುವವರ ಬಗ್ಗೆ ಇರುವ ತಾರತಮ್ಯದ ಭಾವನೆಗಳಿಂದ ಸೋಂಕಿತರ ಬದುಕಿಗೆ ಗ್ರಹಣ ಹಿಡಿದಂತೆ ಆಗಿದೆ ಎಂದರು.

ADVERTISEMENT

ಆಕಾಶ್ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜೇಶ್, ಜಿಲ್ಲೆಯಲ್ಲಿ ಪರೀಕ್ಷೆ ನಡೆಸಿದ ಗರ್ಭಿಣಿಯರಲ್ಲಿ 60 ಮಹಿಳೆಯರು ಎಚ್‌ಐವಿ ಸೋಂಕಿತರು ಎಂದು ದೃಢ ಪಟ್ಟಿದೆ. ಎಚ್‌ಐವಿ ಸೋಂಕು ತಡೆಗಟ್ಟಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಸಿಟಿಸಿ ಕೇಂದ್ರಗಳಿವೆ. ಅಪ್ತ ಸಮಾಲೋಚನೆ ಮತ್ತು ಉಚಿತ ಪರೀಕ್ಷೆಗೆ ಅವಕಾಸ ಇದೆ. ಸೋಂಕಿತರಿಗೆ ಜೀವನಪರ್ಯಂತ ಚಿಕಿತ್ಸೆ ವ್ಯವಸ್ಥೆ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಸರ್ಕಾರ ಸೋಂಕಿತರಿಗೆ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ ನೀಡುತ್ತಿದೆ. ಶಾಲಾ ಮಕ್ಕಳಿಗೆ ಕಾಬಾ ಯೋಜನೆ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಪೌಷ್ಟಿಕಾಂಶದ ಆಹಾರದ ನೆರವು, ಧನಶ್ರೀ ಮತ್ತು ಚೇತನ ಯೋಜನೆಯಡಿ ಸೌಲಭ್ಯ ನೀಡುತ್ತಿದೆ ಎಂದರು.

ಆಕಾಶ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ವಾಸುದೇವ್, ನಿರ್ದೇಶಕ ಡಾ.ಸತೀಶ್ ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಪುರಸಭೆ ಸದಸ್ಯ ಎಂ.ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.