ADVERTISEMENT

ತಪಸ್ವಿಗಳ ನೆಲೆವೀಡು ಓಂಕಾರೇಶ್ವರ ದೇಗುಲ

250 ವರ್ಷಗಳ ಹಿಂದೆ ಊಟಿ ಮಾರ್ಗದ ಮಧ್ಯೆ ನೀಲಗಿರಿ ಕಾಡಿನಲ್ಲಿ ಇದ್ದರೆಂಬ ಪ್ರತೀತಿ

ಎಂ.ಮುನಿನಾರಾಯಣ
Published 4 ಮಾರ್ಚ್ 2018, 9:34 IST
Last Updated 4 ಮಾರ್ಚ್ 2018, 9:34 IST
ದೇವಾಲಯದಲ್ಲಿನ ಶಿವಲಿಂಗಗಳು
ದೇವಾಲಯದಲ್ಲಿನ ಶಿವಲಿಂಗಗಳು   

ವಿಜಯಪುರ: ನೂರೊಂದು ಲಿಂಗಗಳ ತಾಣವಾಗಿರುವ ವಿಜಯಪುರದ ಗುರಪ್ಪನಮಠದ ಓಂಕಾರೇಶ್ವರಸ್ವಾಮಿ ದೇವಾಲಯ ತಪಸ್ವಿಗಳ ನೆಲೆವೀಡು ಎಂಬ ಪ್ರತೀತಿ ಇದೆ.

250 ವರ್ಷಗಳ ಹಿಂದೆ ಮೈಸೂರು- ಊಟಿ ಮಾರ್ಗದ ಮಧ್ಯೆ ನೀಲಗಿರಿ ಕಾಡಿನಲ್ಲಿ ಮಣ್ಣು ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಂಡುಬಂದಿದ್ದ ಹುತ್ತ ಒಂದರಲ್ಲಿ ಧ್ಯಾನಮಗ್ನರಾಗಿ ಕಂಡು ಬಂದಿದ್ದ ಸನ್ಯಾಸಿಯೊಬ್ಬರನ್ನು ಎಬ್ಬಿಸಲು ಹೋದ ಸಂದರ್ಭದಲ್ಲಿ ಎಷ್ಟೇ ಎಬ್ಬಿಸಿದರೂ ಧ್ಯಾನದಲ್ಲಿ ಮುಳುಗಿದ್ದರಿಂದ ಅವರು ಮೇಲೆ ಏಳಲಿಲ್ಲವಂತೆ. ಬೃಹತ್ ಗಾತ್ರದ ಬೆಣ್ಣೆಯ ಮುದ್ದೆ ತಂದು ಅವರ ತಲೆಯ ಮೇಲೆ ಇಡಲಾಗಿ ಅದು ಕರಗಿ ತುಪ್ಪವಾದ ನಂತರ ಅವರು ಎದ್ದರು. ಈ ವಿಚಾರ ಅರಿತ ಮೈಸೂರಿನ ಅರಸರು ಸಕಲ ಮರ್ಯಾದೆಯಿಂದ ಅವರನ್ನು ಅರಮನೆಗೆ ಕರೆಸಿಕೊಳ್ಳುತ್ತಾರೆ ಎನ್ನುವ ಐಹಿತ್ಯ ಇದೆ.

ಇಹಲೋಕದ ಸುಖಭೋಗ ತೊರೆದಿದ್ದ ಸನ್ಯಾಸಿ ಅರಮನೆ ವಾತಾವರಣಕ್ಕೆ ಹೊಂದಿಕೊಳ್ಳಲು ಇಷ್ಟಪಡದೆ ಪರಿತಪಿಸುತ್ತಿದ್ದರು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಈ ಸಂದರ್ಭದಲ್ಲಿ ಮೈಸೂರಿನ ಪ್ರಸಿದ್ಧ ದಸರಾ ನೋಡಲು ತೆರಳಿದ್ದ ವಿಜಯಪುರದ ವ್ಯಕ್ತಿಯೊಬ್ಬರನ್ನು ಕಂಡು ಎತ್ತಿನಗಾಡಿಯಲ್ಲಿ ಕುಳಿತು ಪ್ರಯಾಣ ಬೆಳೆಸಿ ಧ್ಯಾನಕ್ಕಾಗಿ ಉತ್ತಮವಾದ ಸ್ಥಳ ಹುಡುಕುತ್ತಾ ತಪೋಭೂಮಿ ಅನ್ವೇಷಣೆಗೆ ಹೋರಟ ಸನ್ಯಾಸಿಗೆ ಸಿಕ್ಕ ಸೂಕ್ತ ಸ್ಥಾನವೇ ವಿಜಯಪುರದ ಓಂಕಾರೇಶ್ವರಸ್ವಾಮಿ ದೇವಾಲಯದ ಸ್ಥಳ. ಇಲ್ಲಿಯೇ ಅವರು ಜೀವಸಮಾಧಿಯೂ ಆಗಿದ್ದಾರೆ ಎನ್ನುತ್ತಾರೆ ಹಿರಿಯರಾದ ಶಿವಪ್ಪ, ನಾರಾಯಣಸ್ವಾಮಿ.

ADVERTISEMENT

ಈ ಸ್ಥಳದಲ್ಲಿ ದಟ್ಟವಾಗಿ ಬೆಳೆದು ನಿಂತಿದ್ದ ಬೃಹತ್ ಕಾಡಿನಲ್ಲಿ ಅವರು ಬಂದು ನೆಲೆಸಿ ತಪಸ್ಸು ಆರಂಭಿಸಿದ್ದರು. ಅವರನ್ನು ನೀಲಗಿರೀಶ್ವರ ಸಾಧು ಎಂದು ಕರೆದ ಸ್ಥಳೀಯ ಜನರು ಅವರು ತಪ್ಪಸ್ಸು ಮಾಡುತ್ತಿದ್ದ ಸ್ಥಳದಲ್ಲಿ ಒಂದು ಮಠ ನಿರ್ಮಾಣ ಮಾಡಿದರು. ಇಂದಿನ ಹೊಸಕೋಟೆ ತಾಲ್ಲೂಕಿನ ಬೇಗೂರು ಗ್ರಾಮದಿಂದ ಯೋಗಿಯನ್ನು ನೋಡಲು ಬಂದವರೇ ಗುರಪ್ಪಸ್ವಾಮಿ. ಇಲ್ಲಿಗೆ ಬಂದ ನಂತರ ಯೋಗಿಗಳ ತೇಜಸ್ಸು, ತಪೋಶಕ್ತಿ ಅರಿತು ಅವರ ಶಿಷ್ಯರಾಗಿ ಇಲ್ಲಿಯೇ ಉಳಿದುಕೊಳ್ಳುತ್ತಾರೆ.

ಮಹಾ ತಪಸ್ವಿಯಾಗಿ ನೀಲಗಿರಿಸ್ವಾಮೀಜಿ ನಂತರ ಮಠದ ಉಸ್ತುವಾರಿ ವಹಿಸಿಕೊಂಡು ಅನೇಕ ಪವಾಡಗಳನ್ನು ಮಾಡಿದ್ದಾರೆ. ಇವರ ಕಾಲದಲ್ಲಿಯೇ ಕೈವಾರದ ಯೋಗಿ ನಾರೇಯಣ ಯತೀಂದ್ರರು ಇಲ್ಲಿಗೆ ಬಂದಿದ್ದರು ಎಂದು ಹೇಳಲಾಗುತ್ತದೆ.

ವಿಜಯಪುರದಲ್ಲಿ ನಿರ್ಮಾಣ ಮಾಡಿರುವ ಅವರ ಸಮಾಧಿ ಇಂದಿಗೂ ಕಾಣಬಹುದು. ಪ್ರತಿ ವರ್ಷ ನಡೆಯುವ ಬ್ರಹ್ಮರಥೋತ್ಸವಕ್ಕೆ ನಂಜಾವಧೂತರ ನಂತರ ಪೀಠ ಅಲಂಕರಿಸಿರುವವರು ಬಂದು ಚಾಲನೆ ನೀಡಿ ಹೋಗುವುದು ವಾಡಿಕೆಯಾಗಿದ್ದು, ಬ್ರಹ್ಮ ರಥೋತ್ಸವ ಮಾ.4ರಂದು ನಡೆಯಲಿದೆ.

ನೂರೊಂದು ಲಿಂಗ: ದೇವಾಲಯದ ಗರ್ಭಗುಡಿಯಲ್ಲಿ ಓಂಕಾರೇಶ್ವರಸ್ವಾಮಿ ಮೂಲ ವಿಗ್ರಹ ವಿರಾಜಮಾನವಾಗಿದ್ದರೆ ಪಕ್ಕದಲ್ಲಿಯೇ ಗಣೇಶ, ಪಾರ್ವತಿ ವಿಗ್ರಹಗಳು ಪೂಜೆಗೊಳ್ಳುತ್ತವೆ. ಗರ್ಭಗುಡಿಯ ಸುತ್ತಲೂ ನೂರೊಂದು ಲಿಂಗಗಳು ಪ್ರತಿಷ್ಠಾಪನೆಗೊಂಡಿದ್ದು, ಕೇಂದ್ರದಲ್ಲಿ ಮೂಲ ಲಿಂಗವಿರುವುದು ವಿಶೇಷ. ಸುತ್ತಲಿನ ನೂರೊಂದು ಲಿಂಗಗಳಿಗೆ ದಕ್ಷಿಣಾಮೂರ್ತಿ, ಕಾಲಭೈರವೇಶ್ವರಸ್ವಾಮಿ, ಕುಂಭೇಶ್ವರ, ವೃಷಭೇಶ್ವರ, ಚಂಡಿಕೇಶ್ವರ, ವಿಶ್ವೇಶ್ವರ ಹೆಸರುಗಳನ್ನು ಒಳಗೊಂಡಿದೆ.
***
ಪವಾಡ ಪುರುಷ ಗುರುಪ್ಪಸ್ವಾಮಿ

ಒಮ್ಮೆ ಎಲ್ಲ ತಪಸ್ವಿಗಳು ತಮ್ಮಲ್ಲಿನ ತಪಶಕ್ತಿಯನ್ನು ತೋರ್ಪಡಿಸಿಕೊಳ್ಳುವ ಸಂದರ್ಭ ಎದುರಾದಾಗ ಗುರಪ್ಪಸ್ವಾಮಿ ನೀರನ್ನು ಮಂತ್ರಿಸಿ ಅಲ್ಲಿದ್ದ ಪಕ್ಷಿಗಳ ಮೇಲೆ ಎರಚುತ್ತಾರೆ. ಪಕ್ಷಿಗಳೆಲ್ಲವೂ ಸತ್ತುಹೋಗುತ್ತವೆ. ನಂತರ ಪಕ್ಷಿಗಳನ್ನು ಬದುಕಿಸಲು ಮತ್ತೆ ನೀರು ಮಂತ್ರಿಸಿ ಎರಚಿದಾಗ ಒಂದು ಪಕ್ಷಿ ಬಿಟ್ಟು ಬೇರೆಲ್ಲ ಪಕ್ಷಿಗಳು ಹಾರಿಹೋಗುತ್ತವೆ.

ಒಂದು ಪಕ್ಷಿ ಬದುಕದೇ ಇರಲು ಕಾರಣವೇನು ? ಮಂತ್ರಶಕ್ತಿಯಲ್ಲಿ ಇರುವ ದೋಷವೇನು ಎಂಬುದಕ್ಕೆ ಕಾರಣ ಹುಡುಕುವಾಗ ಕೈವಾರದ ಯೋಗಿನಾರಾಯಣ ಯತೀಂದ್ರರ ಸಲಹೆಯಂತೆ ಈಗಿನ ಓಂಕಾರೇಶ್ವರಸ್ವಾಮಿ ದೇವಾಲಯ ಸ್ಥಾಪನೆ ಹಾಗೂ ನೂರೊಂದು ಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಎಂಬ ಪ್ರತೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.