ADVERTISEMENT

ತಿಂಗಳಲ್ಲಿ 14.27ಕೋಟಿ ರೂ ಕಾಮಗಾರಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 16:45 IST
Last Updated 9 ಸೆಪ್ಟೆಂಬರ್ 2011, 16:45 IST

ದೇವನಹಳ್ಳಿ: ಕಳೆದ ಮೂರು ವರ್ಷಗಳ ಬಿ.ಜೆ.ಪಿ ಆಡಳಿತಾವಧಿಯಲ್ಲಿ ಬಿಡುಗಡೆಯಾಗಿರುವ ವಿವಿಧ ಯೋಜನೆಗಳ 14.27ಕೋಟಿ ರೂ ಕಾಮಗಾರಿಗಳಿಗೆ ಶೀಘ್ರ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ಗುರಪ್ಪ ತಿಳಿಸಿದರು.

ಇಲ್ಲಿನ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಗ್ರಾಮೀಣ ಅಭಿವೃದ್ಧಿ ಹಾಗೂ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡಿ ಸ್ಪಂದಿಸುತ್ತಿದೆ. ಪರಿಶಿಷ್ಟರಿಗೆ ಇಷ್ಟೊಂದು ಬೃಹತ್ ಪ್ರಮಾಣದ ಅನುದಾನ ಈ ಹಿಂದಿನ ಶಾಸಕರಾಗಲಿ, ಹಾಲಿ ಶಾಸಕರಾಗಲಿ 50ವರ್ಷದಿಂದ ಆಡಳಿತ ನಡೆಸಿದ ಸರ್ಕಾರವಾಗಲಿ ನೀಡಿರಲಿಲ್ಲ ಎಂದರು.

ರಾಜ್ಯ ಬಿ.ಜೆ.ಪಿ ರೈತ ಮೋರ್ಚ ಉಪಾಧ್ಯಕ್ಷ ನಾರಾಯಣಗೌಡ ಮಾತನಾಡಿ ತಾಲ್ಲೂಕು ಮತ್ತು ಜಿಲ್ಲಾ ಬಿ.ಜೆ.ಪಿ ಪದಾಧಿಕಾರಿಗಳ ಅವಿರತ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ, ಗ್ರಾಮೀಣ ಸಂಪರ್ಕ ರಸ್ತೆಗಳು ಸಮರ್ಪಕವಾಗಿಲ್ಲ. ತಾಲ್ಲೂಕಿನಲ್ಲಿ ಅನೇಕ ಸಮಸ್ಯೆಗಳಿವೆ. ಹಂತಹಂತವಾಗಿ ಅನುಧಾನ ಪಡೆದು ಕಾಮಗಾರಿ ನಡೆಸಬೇಕಿದೆ ಎಂದರು.

ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಹಣ :
ಪಟ್ಟಣದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ, 1.8 ಎಕರೆ ಸ್ಥಳದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಒಟ್ಟು 6ಕೋಟಿ ರೂ. ಕುಂದಾಣ ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿವೇಶನ ಕ್ಕೆ 16 ಎಕರೆ ಸ್ಥಳದಲ್ಲಿ ನೂತನ ಕಟ್ಟಡಕ್ಕಾಗಿ 499.36 ಲಕ್ಷ ರೂ ಅನುದಾನ ಬಿಡುಗಡೆ.

ವಿಜಯಪುರ ಪಟ್ಟಣ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡಕ್ಕೆ 99.80 ಲಕ್ಷ ರೂ ಮಂಜೂರು.
ದೇವನಹಳ್ಳಿ ಪಟ್ಟಣದಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿ ನಿಲಯ ಹೆಚ್ಚುವರಿ ಕಟ್ಟಡಕ್ಕಾಗಿ 42.75 ಲಕ್ಷ ರೂ.

ತಾಲ್ಲೂಕಿನ ಬಿಜ್ಜವಾರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ 85.50 ಲಕ್ಷ ರೂ.
ಪಟ್ಟಣ ಗೋಕಲೆ ರಸ್ತೆಯಲ್ಲಿ ನೂತನ ವಾಲ್ಮಿಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೇ ಶಂಕುಸ್ಥಾಪನೆ ಕಾರ್ಯ ನಡೆಸಲಾಗುವುದೆಂದು ತಿಳಿಸಿದ್ದಾರೆ.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ವಕೀಲ ಎನ್.ರಮೇಶ್, ಜಿಲ್ಲಾ ಎಸ್.ಟಿ.ಮೋರ್ಚ ಕಾರ್ಯದರ್ಶಿ ಮಾಚಪ್ಪ, ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ದೇ.ಸು.ನಾಗರಾಜ್, ತಾಲ್ಲೂಕು ಎಸ್.ಸಿ.ಮೋರ್ಚ ಅಧ್ಯಕ್ಷ ಎಸ್.ಜಿ.ನಾರಾಯಣಸ್ವಾಮಿ, ತಾಲ್ಲೂಕು ಬಿ.ಜೆ.ಪಿ ಕಾರ್ಯದರ್ಶಿ ಕೆ.ಎನ್.ಮುನೇಗೌಡ, ತಾಲ್ಲೂಕು ಎಸ್.ಟಿ.ಮೋರ್ಚ ಅಧ್ಯಕ್ಷ ಅಪ್ಪಯಣ್ಣ, ಎಸ್.ಸಿ.ಮೋರ್ಚ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.