ADVERTISEMENT

ತ್ಯಾಜ್ಯದಿಂದ ಮುಚ್ಚಿ ಹೋದ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:29 IST
Last Updated 7 ನವೆಂಬರ್ 2017, 5:29 IST
ವಿಜಯಪುರದ ಬಸ್ ನಿಲ್ದಾಣದ ಬಳಿಯಿರುವ ಪುರಾತನ ಕಲ್ಯಾಣಿಗಳಿಗೆ ತ್ಯಾಜ್ಯ ಸುರಿದಿರುವುದರಿಂದ ಅರ್ಧಭಾಗ ಮುಚ್ಚಿಹೋಗಿದೆ
ವಿಜಯಪುರದ ಬಸ್ ನಿಲ್ದಾಣದ ಬಳಿಯಿರುವ ಪುರಾತನ ಕಲ್ಯಾಣಿಗಳಿಗೆ ತ್ಯಾಜ್ಯ ಸುರಿದಿರುವುದರಿಂದ ಅರ್ಧಭಾಗ ಮುಚ್ಚಿಹೋಗಿದೆ   

ವಿಜಯಪುರ: ದೇವಾಲಯಗಳ ನಗರಿ, ಪಂಚಕಲ್ಯಾಣಿಗಳ ತವರೂರು ಎಂದೇ ಖ್ಯಾತಿ ಪಡೆದಿರುವ ವಿಜಯಪುರ, ಬಯಲು ಸೀಮೆ ಭಾಗದಲ್ಲಿ ಪ್ರಮುಖವಾದ ವಾಣಿಜ್ಯ ನಗರಿಯಾಗಿದೆ. ಇಲ್ಲಿ ಪುರಾತನ ಕಾಲದ ದೇವಾಲಯಗಳಿವೆ.

ಮಸೀದಿಗಳಿವೆ, ಚರ್ಚುಗಳಿವೆ. ಸರ್ವಧರ್ಮೀಯರು ಸಾಮರಸ್ಯದಿಂದ ತಮ್ಮ ಬದುಕು ಕಟ್ಟಿಕೊಂಡಿರುವ ನಗರವಾಗಿದ್ದು, ಇಲ್ಲಿನ ಹಿರಿಯರು ಜನತೆಯ ಒಳಿತಿಗಾಗಿ ನಿರ್ಮಾಣ ಮಾಡಿದ್ದ ಕೆರೆ, ಕುಂಟೆಗಳು, ರಾಜಕಾಲುವೆಗಳನ್ನು ಮುಚ್ಚಿಹಾಕಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಈಗ ಜಲಮೂಲಗಳಾದ ಕಲ್ಯಾಣಿಗಳು ಕಣ್ಮರೆಯಾಗುತ್ತಿದ್ದರೂ ಯಾರು ಪ್ರಶ್ನೆ ಮಾಡುತ್ತಿಲ್ಲ ಎಂದು ಯುವ ಮುಖಂಡ ಡಿ.ಎಂ.ಮುನೀಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಹುತೇಕ ಕಡೆಗಳಲ್ಲಿ ಕೆರೆಗಳು ಒತ್ತುವರಿಯಾಗಿವೆ. ರಾಜಕಾಲುವೆಗಳು ಮುಚ್ಚಿಹೋಗಿವೆ. ಮಳೆಯ ನೀರು ಕೆರೆಗಳಲ್ಲಿ ಶೇಖರಣೆಯಾಗದ ಕಾರಣ, ಹಿರಿಯರು ನಿರ್ಮಾಣ ಮಾಡಿದ್ದ ಕಲ್ಯಾಣಿಗಳು ಬತ್ತಿಹೋಗಿವೆ. ಅವುಗಳನ್ನು ಪುರುಜ್ಜೀವನಗೊಳಿಸಿ, ಮಳೆಯ ನೀರು ಶೇಖರಣೆಯಾಗುವಂತೆ ಮಾಡಿದರೆ ಅಂತರ್ಜಲದ ಮಟ್ಟ ವೃದ್ಧಿಯಾಗುವುದರ ಜೊತೆಗೆ, ಕುಡಿಯುವ ನೀರು ಪೂರೈಕೆಗೂ ಅನುಕೂಲವಾಗಲಿದೆ ಎಂದಿದ್ದಾರೆ.

ADVERTISEMENT

ಇಲ್ಲಿನ ಬಸ್ ನಿಲ್ದಾಣ ಸಮೀಪದಲ್ಲಿ ಅಳಿವಿನ ಅಂಚಿನಲ್ಲಿರುವ ಐತಿಹಾಸಿಕ ಕಲ್ಯಾಣಿಯ ಅರ್ಧ ಭಾಗದಲ್ಲಿ ಬಾರ್ ಗಳಿಂದ ತಂದು ಹಾಕುವ ಮದ್ಯದ ಪ್ಯಾಕೆಟ್‌ಗಳು, ಹೂವಿನ ಅಂಗಡಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಸಿರಿಂಜ್ ಗಳನ್ನು ಸುರಿಯಲಾಗುತ್ತಿದೆ. ಇದರಿಂದ ಅರ್ಧ ಕಲ್ಯಾಣಿ ಮುಚ್ಚಿಹೋಗಿದೆ. ಕೆಲವರು ಇಲ್ಲಿ ಸುರಿದಿರುವ ಕಸಕ್ಕೆ ಬೆಂಕಿ ಹಚ್ಚಿ ಮಾಲಿನ್ಯವನ್ನುಂಟು ಮಾಡುತ್ತಿದ್ದಾರೆ. ಪುರಾತನ ಸ್ಮಾರಕಗಳಿಗೆ ಕಾಯಕಲ್ಪ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಖಂಡ ವಿ.ಪಿ.ಚಂದ್ರು ಮಾತನಾಡಿ, ‘ಹಿಂದಿನ ಕಾಲದಲ್ಲಿ ಕೆರೆ ಕುಂಟೆ, ಕಲ್ಯಾಣಿ, ಬಾವಿಗಳನ್ನು ನಿರ್ಮಿಸುವುದರಿಂದ ನಮಗೆ ಉಪಯೋಗವಾಗುತ್ತದೆಂದು ತಿಳಿದಿದ್ದ ಹಿರಿಯರು ಆ ಕೆಲಸ ಮಾಡಿ ತೋರಿಸಿದ್ದಾರೆ.ಆದರೆ ನಾವು ಅವುಗಳು ಮುಚ್ಚಿ ಹೋಗುವಂತೆ ಮಾಡಿ ನೀರಿಗಾಗಿ ಹೋರಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವುದಷ್ಟೆ ಅಲ್ಲದೆ, ಅವುಗಳ ಮಹತ್ವ ಮತ್ತು ಅವುಗಳನ್ನು ನಿರ್ಮಾಣ ಮಾಡಿದರೆ ಪರಿಚಯವನ್ನು ಯುವಪೀಳಿಗೆಗೆ ಮಾಡಿಸುವುದರಿಂದ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಇಂತಹ ನೀರಿನ ಮೂಲಗಳು ಕಣ್ಮರೆಯಾಗುತ್ತಿರುವುದರಿಂದ ಬಯಲುಸೀಮೆ ಭಾಗದಲ್ಲಿನ ಜನರು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಬೇಕಾಗಿದೆ. ಕೆರೆಗಳಲ್ಲಿನ ಹೂಳು ತೆಗೆಯಲು ಅನುದಾನ ಮೀಸಲಿಡುವ ಮಾದರಿಯಲ್ಲಿ ಪುರಾತನ ಕಲ್ಯಾಣಿಗಳನ್ನು ರಕ್ಷಣೆ ಮಾಡಲು ಅನುದಾನ ಕೊಟ್ಟರೆ, ಸಹಕಾರಿಯಾಗಲಿದೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಕೊಟ್ಟಿದ್ದೇವೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದ್ದಾರೆ.

ಎಂ.ಮುನಿನಾರಾಯಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.