ADVERTISEMENT

ದಾಖಲೆ ಮಳೆಗೆ 2 ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 5:19 IST
Last Updated 11 ಅಕ್ಟೋಬರ್ 2017, 5:19 IST

ದೇವನಹಳ್ಳಿ: ತಾಲ್ಲೂಕಿನಲ್ಲಿ ಸೋಮವಾರ ಒಂದೇ ರಾತ್ರಿ ಸುರಿದ ದಾಖಲೆಯ ಮಳೆಗೆ ಎರಡು ಮನೆಗಳು ಕುಸಿದಿವೆ. ಕನ್ನಮಂಗಲ ಕೆರೆ ಕೋಡಿ ಹರಿದಿದೆ.
ಚನ್ನರಾಯಪಟ್ಟಣ ಹೋಬಳಿ 113 ಮಿ.ಮೀ, ದೇವನಹಳ್ಳಿ ಕಸಬಾ 80 ಮಿ.ಮೀ, ವಿಜಯಪುರ ಹೋಬಳಿ 51 ಮಿ.ಮೀ, ಕುಂದಾಣ ಹೋಬಳಿ 78 ಮಿ.ಮೀ, ಮಳೆ ಸುರಿದಿದ್ದು ಸರಾಸರಿ ಒಟ್ಟು 80 ಮಿ.ಮೀ ಮಳೆಯಾಗಿದೆ ಎಂದು ದೇವನಹಳ್ಳಿ ಕೃಷಿ ಇಲಾಖೆ ಮಾಹಿತಿ ನೀಡಿದೆ.

ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಡುರಂಗನಪುರ ಗ್ರಾಮದ ಬಚ್ಚಮ್ಮ ಮತ್ತು ಮಲ್ಲಿಕಾ ಎಂಬುವವರ ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮತ್ತೊಂದೆಡೆ ತಾಲ್ಲೂಕಿನ ಕನ್ನಮಂಗಲ ಕೆರೆ ಬಹು ವರ್ಷಗಳ ನಂತರ ಕೋಡಿ ಹರಿದಿದ್ದು ಸ್ಥಳೀಯ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದ್ದಾರೆ.

ಬೆಳೆ ಇಳುವರಿ ಕಡಿಮೆ ಆತಂಕ: 15 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಂತರ್ಜಲ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಅನೇಕ ತಗ್ಗು ಪ್ರದೇಶವಿರುವ ಜಮೀನುಗಳಲ್ಲಿ ಮಳೆ ನೀರು ನಿಂತಿದೆ. ಮಳೆಯಿಂದಾಗಿ ರಾಗಿ ಪೈರು ಹಳದಿ ಬಣ್ಣದ ರೂಪ ಪಡೆಯುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತರಕಾರಿಗಳಾದ ಆಲೂಗಡ್ಡೆ, ಗಡ್ಡೆಕೋಸು, ಗೆಣಸು, ಕ್ಯಾರೆಟ್, ಮೂಲಂಗಿ ಬೆಳೆಗಳಿಗೆ ಅನಾನುಕೂಲ. ಮಳೆ ಒಂದು ವಾರ ಬಿಡುವು ನೀಡಿದರೆ ಎಲ್ಲಾ ಬೆಳೆಗಳಿಗೆ ಅನುಕೂಲ. ಮಳೆ ಮುಂದುವರೆದರೆ ಎಲ್ಲಾ ಧಾನ್ಯ ಬೆಳೆಗಳಲ್ಲಿ ಶೇಕಡಾವಾರು ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂಬುದು ರೈತ ರಾಜಣ್ಣನ ಆತಂಕ.

ಬಸಿ ಕಾಲುವೆಗೆ ಸಲಹೆ:  ತಗ್ಗು ಪ್ರದೇಶದಲ್ಲಿ ಬೆಳೆ ಉತ್ಪಾದನೆಗೆ ಮುಂದಾಗಿರುವ ರೈತರು ಜಮೀನಿನಲ್ಲಿ ಮಳೆ ನೀರು ನಿಲ್ಲದಂತೆ ತಾತ್ಕಾಲಿಕ ಬಸಿ ಕಾಲುವೆ ನಿರ್ಮಾಣ ಮಾಡಿದರೆ ಬೀಳುವ ಮಳೆ ನೀರು ಸರಾಗವಾಗಿ ಹರಿಯಲಿದೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್. ಮಂಜುಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.