ADVERTISEMENT

ದೇವನಹಳ್ಳಿಯ ರೈತರಿಗೆ ಕಾಬೂಲ್ ಕಡಲೆ ರುಚಿ!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಐತಿಹಾಸಿಕವಾಗಿ ಪ್ರಸಿದ್ಧವಾದ ಸ್ಥಳ. ಇಲ್ಲಿನ ಪರಂಪರಾಗತ ಚಕ್ಕೋತ, ಸುಗಂಧ ರಾಜ, ಕನಕಾಂಬರದ ಖ್ಯಾತಿ ಯಾರಿಗೆ ತಾನೆ ಗೊತ್ತಿಲ್ಲ?

ಸುಗಂಧ ಸೂಸುವ ದವನ ಹಾಗೂ ರುಚಿಕರ ತರಕಾರಿ ಬೆಳೆಗೂ ತಾಲ್ಲೂಕಿನ ಮಣ್ಣು ಫಲವಾತ್ತಾಗಿದೆ. ಇದೀಗ ಇಲ್ಲಿನ ರೈತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಬೂಲ್ ಕಡಲೆಯ ಪ್ರಾಯೋಗಿಕ ಬಿತ್ತನೆ ನಡೆಸಿದ್ದು ಅದರಲ್ಲೂ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾನೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಡಲೆ ಬೆಳೆ ಸಂಶೋಧನಾ ಕೇಂದ್ರ ಹಾಗೂ ತಾಲ್ಲೂಕಿನ ಹಾಡೋಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಈ ದಿಸೆಯಲ್ಲಿ ರೈತರಿಗೆ ಅಗತ್ಯ ಮಾಹಿತಿ ನೀಡಿ ರಿಯಾಯಿತಿ ದರದಲ್ಲಿ ಸುಧಾರಿತ ತಳಿಯ ಬೀಜಗಳನ್ನೂ ಪೂರೈಸಿದೆ.

ಕಾಲಕಾಲಕ್ಕೆ ಸೂಕ್ತ ಸಲಹೆ, ಸೂಚನೆ ನೀಡುತ್ತಾ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಬೂಲ್ ಕಡಲೆ ಯಶಸ್ಸಿಗೆ ಕೈಜೋಡಿಸಿದೆ.

ಕಡಲೆ ಬರಿ ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಕಪ್ಪು ಮಣ್ಣಿನ ಭೂಮಿಗೆ ಸೀಮಿತ ಎಂಬ ಮಾತಿದೆ. ಆದರೆ ಇದನ್ನು ಸುಳ್ಳು ಮಾಡುವಂತೆ ಹೆಚ್ಚಿನ ಇಳುವರಿ ಮತ್ತು ಲಾಭದಾಯಕ ಕೃಷಿಯಾಗಿ ಕಾಣಿಸುತ್ತಿರುವ ಕಾಬೂಲ್ ಕಡಲೆ ಬೆಳೆ ಈಗ ದೇವನಹಳ್ಳಿ ಭಾಗದ ರೈತರ ಕಣ್ಣುಗಳನ್ನೂ ಅರಳಿಸಿದೆ.

ಚಳಿಯಲ್ಲಿನ ವಾತಾವರಣ ಕಡಲೆ ಬೆಳೆಗೆ ಶೇ.100ರಷ್ಟು ಸೂಕ್ತ. ಹಿಂಗಾರಿನಲ್ಲಿ ಅತಿ ಸುಲಭವಾಗಿ ಮತ್ತು ರೋಗ ಮುಕ್ತ ಕಡಲೆ ಬೆಳೆ ಪಡೆಯಲು ಸಾಧ್ಯ ಎಂಬುದು ಕೃಷಿ ವಿಜ್ಞಾನಿಗಳ ಅಂಬೋಣ.

`ಉತ್ತರ ಕರ್ನಾಟಕದ ಅಣ್ಣಿಗೇರಿ ತಳಿಗಿಂತ ಜೆ.ಜಿ.11 ತಳಿ ಉತ್ತಮ. ಅಲ್ಲದೆ ಎ್ಲ್ಲಲಕ್ಕಿಂತಲೂ ಹೆಚ್ಚಾಗಿ ಕಾಬೂಲ್ ಕಡಲೆ ಬೆಳೆ ಗುಣಮಟ್ಟದೊಂದಿಗೆ ಇಳುವರಿಯೂ ಹೆಚ್ಚು. ಹೀಗಾಗಿ ದೇವನಹಳ್ಳಿ ಸುತ್ತಮುತ್ತಲ ಪ್ರದೇಶ ಕಾಬೂಲ್ ಕಡಲೆ ಬೆಳೆಗೆ ಪ್ರಶಸ್ತವಾಗಿರುವುದು ಈಗ ಸಾಬೀತಾಗಿದೆ~ ಎನ್ನುತ್ತಾರೆ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ ಕಡಲೆ ಬೆಳೆ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಕೆ.ಪಿ.ವಿಶ್ವನಾಥ್.

ತಾಲ್ಲೂಕಿನ ಬಿಡಿಗಾನಹಳ್ಳಿ ರೈತ ಕೃಷ್ಣಪ್ಪ ಹೇಳುವಂತೆ `ಮುಂಗಾರಿನಲ್ಲಿ ಬೀಟ್‌ರೊಟ್ ಹಾಕಿದ್ದೆ. ನಂತರ ಕೃಷಿ ವಿಜ್ಞಾನಿಗಳ ಸಲಹೆಯಂತೆ 13ಗುಂಟೆ ಜಮೀನಿನಲ್ಲಿ ಸಾವಿರ ರೂಪಾಯಿಗಳಿಗೆ 10ಕೆ.ಜಿ (ಕಾಕ್2) ದಪ್ಪ ಕಾಳಿನ ಕಾಬೂಲಿ ತಳಿ ಬೀಜ ಖರೀದಿಸಿ ಬಿತ್ತಿದ್ದೆ. ಅವುಗಳನ್ನು ನಾಲ್ಕು ಗಂಟೆ ಕಾಲ ನೀರಿನಲ್ಲಿ ನೆನೆಸಿ ನಂತರ ನೆರಳಿನಲ್ಲಿ ಸ್ವಲ್ಪ ತೇವಾಂಶ ಆರಿದ ನಂತರ 10 ಸೆ.ಮಿ ಆಳದಲ್ಲಿ 10ಸೆ.ಮಿ ಅಂತರದಲ್ಲಿ ಬಿತ್ತನೆ ಮಾಡಿದ್ದೆ. ಗೊಬ್ಬರವಿಲ್ಲ, ಔಷಧವನ್ನೂ ಬಳಸಲಿಲ್ಲ. ಒಟ್ಟು ಖರ್ಚು 1,500 ಮಾತ್ರ ಆಗಿದೆ. ಬಿತ್ತನೆ ನಂತರ ಒಮ್ಮೆ ಸಾಧಾರಣ ಮಳೆ ಬಂತು ಅಷ್ಟೇ. ಕಳೆ ಎಲ್ಲೂ ಬೆಳೆಯಲಿಲ್ಲ. ಕೂಲಿ ಖರ್ಚು ಇಲ್ಲ. ನಾವೇ ಕೊಯ್ಲು ಮಾಡುತ್ತೇವೆ. 4 ಕ್ವಿಂಟಲ್ ಇಳುವರಿಯನ್ನು ನಿರೀಕ್ಷಿಸಲಾಗಿದೆ~ ಎಂಬುದನ್ನು ಕೇಳಿದಾಗ ಕಾಬೂಲ್ ಕಡಲೆಯ ಕೃಷಿ ರೈತರಲ್ಲಿ ಆಸೆ ಮೂಡಿಸದೇ ಇರದು.

`ಪ್ರಸ್ತುತ ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್‌ಗೆ 7 ರಿಂದ 8ಸಾವಿರ ರೂಪಾಯಿಗಳಿದ್ದು 13 ಗುಂಟೆ ಬೆಳೆಗೆ 30 ಸಾವಿರ ಕೈಸೇರುವ ನಿರೀಕ್ಷೆ ಇದೆ~ ಎಂಬುದು ಕೃಷ್ಣಪ್ಪನ ಅಂದಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.