ADVERTISEMENT

ನಗರಸಭೆ ಆಡಳಿತ ವೈಖರಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 6:10 IST
Last Updated 19 ಮಾರ್ಚ್ 2011, 6:10 IST
ನಗರಸಭೆ ಆಡಳಿತ ವೈಖರಿಗೆ ಪ್ರತಿಭಟನೆ
ನಗರಸಭೆ ಆಡಳಿತ ವೈಖರಿಗೆ ಪ್ರತಿಭಟನೆ   

ದೊಡ್ಡಬಳ್ಳಾಪುರ: ಅಭಿವೃದ್ಧಿ ಬಗ್ಗೆ ಗಮನ ನೀಡದೆ ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಇಲ್ಲಿನ ನಗರಸಭೆ ಸದಸ್ಯರ ಆಡಳಿತ ವೈಖರಿ ಖಂಡಿಸಿ ಮತ್ತು ನಗರಸಭೆಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿ ನಗರಸಭೆ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ಶುಕ್ರವಾರ ತಲೆ ಚೆಚ್ಚಿಕೊಂಡು ನಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಕರವೇ ಕಾರ್ಯಕರ್ತರ ಈ ಪ್ರತಿಭಟನೆಯಿಂದ ಮುಜುಗರಕ್ಕೊಳಗಾದ ನಗರಸಭೆ ಸದಸ್ಯರು ಪ್ರತಿಭಟನೆ ಮುಕ್ತಾಯವಾಗುವವರೆಗೂ ಕಚೇರಿ ಕಡೆಗೆ ಸುಳಿಯಲಿಲ್ಲ. ಆದರೆ ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಚೇರಿಗೆ ಆಗಮಿಸಿದ ನಗರಸಭೆ ಉಪಾಧ್ಯಕ್ಷ ಜಿ.ರಾಮಕೃಷ್ಣಪ್ಪ ಸಹ ತಲೆ ಚೆಚ್ಚಿಕೊಂಡು ನಗುತ್ತ ‘ನಮ್ಮ ಪಾಡು ಈ ಸ್ಥಿತಿಗೆ ಬಂತು’  ಎನ್ನುತ್ತಲೇ ಒಳ ನಡೆದರು.

ಕರವೇ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಅಬ್ದುಲ್ ಬಷೀರ್, ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಮನು, ಆರ್.ಬಿ.ಮಹೇಶ್, ಸೋಮಶೇಖರ್ ಇತರರು ಮಾತನಾಡಿ, ಒಳಚರಂಡಿ ಕಾಮಗಾರಿ ವಿಳಂಬದಿಂದ ಇಡೀ ನಗರ ದೂಳಿನಿಂದ ತುಂಬಿದೆ. ಯಾವ ರಸ್ತೆಯಲ್ಲಿ ನೋಡಿದರು ಹಳ್ಳಗಳು ಬಿದ್ದಿವೆ. ರಾತ್ರಿ ವೇಳೆ ನಾಗರಿಕರು ಹಾಗೂ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರು ಒಳಚರಂಡಿಗಾಗಿ ತೋಡಲಾಗಿರುವ ಹಳ್ಳಗಳಿಗೆ ಬಿದ್ದು ಕೈ, ಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಗಮನಹರಿಸದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಮೂಲಕ ಸಾರ್ವಜನಿಕರ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.